ಸಹಕಾರ ರತ್ನ ಲಲಿತಾ ಜಿ.ಟಿ.ದೇವೇಗೌಡರಿಗೆ ಅದ್ದೂರಿ ಅಭಿನಂದನೆ : ವಿವಿಧ ಮಠಾಧೀಶರು, ಸಹಕಾರಿಗಳು, ವಾಗ್ಮಿಗಳು, ಕೃಷಿ ಸಾಧಕರಿಂದ ಭರ್ಜರಿ ಸನ್ಮಾನ

ವರದಿ : ನಿಷ್ಕಲ ಎಸ್. ಗೌಡ ಮೈಸೂರು

ಮೈಸೂರು: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲಲಿತಾ ಜಿ.ಟಿ. ದೇವೇಗೌಡ ಅವರಿಗೆ ಗೌರವಪೂರ್ವಕ ಅಭಿನಂದನೆ ಸಲ್ಲಿಸಲಾಯಿತು. 

ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ನಡೆದ ಲಲಿತಾಭಿನಂದನ ಸಮಾರಂಭದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಪ್ರಗತಿಪರ ಕೃಷಿಕರಾದ ಡಾ.ಕವಿತಾ ಮಿಶ್ರ ಅಭಿನಂದಿಸಿದರು. 

ಶಾಸಕ ಜಿ.ಟಿ. ದೇವೇಗೌಡ ದಂಪತಿಯನ್ನು ಅಭಿಮಾನಪೂರ್ವಕವಾಗಿ ಸನ್ಮಾನಿಸಲಾಯಿತು. 

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನೆನಪಿನ ಸುರಳಿ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ, ಲಲಿತಕ್ಕ ಸರಳರು ಮತ್ತು ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಬೆರೆಯುವವರು. ಜಿ.ಟಿ. ದೇವೇಗೌಡರ ರಾಜಕೀಯ ಬೆಳವಣಿಗೆಯಲ್ಲಿ ಲಲಿತಕ್ಕನ ಪ್ರೇರಣೆ ಮತ್ತು ಪ್ರೋತ್ಸಾಹ ಅಗಾಧವಾಗಿದೆ ಎಂದರು. 

ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಬೇಕಾದರೆ ಹೆಚ್ಚು ಮಾತಾಡಬೇಕು. ಭಾರತದಲ್ಲಿ ಮಾತಾಡದಿದ್ದರೆ ಬೆಳವಣಿಗೆಯಾಗುವುದಿಲ್ಲ. ಸುಳ್ಳೋ ನಿಜವೋ ಮಾತಾಡುತ್ತಿರಬೇಕು. ಸಹಕಾರ ಕ್ಷೇತ್ರದಲ್ಲಿರುವ ಲಲಿತಕ್ಕ ಅವರು  ಹೆಚ್ಚು ಮಾತಾಡಬೇಕು. ಆ ದಿಕ್ಕಿನಲ್ಲಿ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.  

ಅಭಿನಂದನಾ ಭಾಷಣ ಮಾಡಿದ ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ. ಕೃಷ್ಣೇಗೌಡ, ಲಲಿತಕ್ಕನಿಗೆ ಪ್ರಶಸ್ತಿ ಬಂದ ನೆಪದಲ್ಲಿ ಅಭಿನಂದನೆ ಏರ್ಪಡಿಸಿರುವುದು ಒಂದು ನೆಪ. ಕವಿ ಕುವೆಂಪು ಹೇಳಿದಂತೆ ಮನೆ ಮನೆಯ ತಪಸ್ವಿನಿಯರಾದ ಗೃಹಣಿಯರನ್ನು ಗೌರವಿಸಲು ಈ ಸಮಾರಂಭ ಆಯೋಜಿಸಿದ್ದೇವೆ. ರಾಜಕಾರಣಿಗಳ ಮನೆಯಲ್ಲಿ ಬೇಗುದಿಯನ್ನು ಲಲಿತಕ್ಕ ಎದುರಿಸಿದ್ದಾರೆ. ತಾಳ್ಮೆಯ ಮಾತಿನಿಂದ ಅಕ್ಕ ಅನ್ನುವ ಯೋಗ್ಯತೆ ಮತ್ತು ಅರ್ಹತೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.   

ಕೃಷಿ ಸಾಧಕಿ ಡಾ.ಕವಿತಾ ಮಿಶ್ರಾ ಮಾತನಾಡಿ, ಹೆಣ್ಣು ಮಗಳು ಸಮಾಜದಲ್ಲಿ ಸಾಧಿಸಲು ಸುಲಭದಲ್ಲಿ ಬಿಡುವುದಿಲ್ಲ. ಬಹಳಷ್ಟು ನಿರೀಕ್ಷಿಸಲ್ಪಟ್ಟವರು ಹೆಣ್ಣು ಮಕ್ಕಳು. ಎಲ್ಲ ಸವಾಲುಗಳ ನಡುವೆ ಸಾಧಿಸಿದ ಲಲಿಕ್ಕನವರು ಸಹಕಾರ ಬ್ಯಾಂಕ್ ಆರಂಭಿಸಿ ಹೆಣ್ಣು ಮಕ್ಕಳಿಗೆ ದಾರಿದೀಪವಾಗಿದ್ದಾರೆ ಎಂದರು.  

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಲಲಿತಾ ಜಿ.ಟಿ.ದೇವೇಗೌಡ ಅಳಿಲು ಸೇವೆ ಮಾಡಿದ ನನಗೆ ಅಪಾರವಾದ ಪ್ರೀತಿ ಗೌರವ ದೊರೆತಿದೆ. ಅದಕ್ಕೆ ಋಣಿಯಾಗಿರುತ್ತೇನೆ ಎಂದ ಅವರು ಜಿ.ಟಿ. ದೇವೇಗೌಡ ಅವರನ್ನು ವಿವಾಹದ ದಿನದಿಂದ ಇಲ್ಲಿಯವರೆಗೂ ಸಾಮಾಜಿಕ ಬದುಕಿನ ಪ್ರಮುಖ ಘಟನಾವಳಿಗಳನ್ನು ಸ್ಮರಿಸಿದರು.  

ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಮುಕ್ತಿದಾನಂದಜೀ ಮಹಾರಾಜ್, ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. 

ಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮುಖಂಡ ಹರದನಳ್ಳಿ ವಿಜಯ್, ಸೌಮ್ಯ ಮುಂತಾದವರಿದ್ದರು. ಲೇಖಕ ಹಾಲತಿ ಸೋಮಶೇಖರ್ ಸ್ವಾಗತಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಚೂಡಾಮಣಿ ನಿರುಪಮಾ ರಾಜೇಂದ್ರ ಮತ್ತು ತಂಡದಿಂದ ನೃತ್ಯ ಸಂಭ್ರಮ ವೈಭವ ನೆರವೇರಿತು. 


 ಹಳೆಯದನ್ನು ನೆನೆದು ಗದ್ಗಿತರಾದ ಜಿ.ಟಿ.ದೇವೇಗೌಡ 

ಮೈಸೂರು: ಲಲಿತಾಭಿನಂದನ ಸಮಾರಂಭದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ಗದ್ಗಿತರಾಗಿ ಕಣ್ಣಿರಿಟ್ಟರು. ಮಾತು ಆರಂಭಿಸುವಾಗಲೇ ದುಃಖಿತರಾದ ಅವರು, ನನ್ನ ಪತ್ನಿ ಒಂದು ದಿನ ಸುಖಪಟ್ಟಿಲ್ಲ. ಸಿನಿಮಾ ನೋಡಲಿಲ್ಲ. ಹೊರಗಡೆ ಹೋಗಲಿಲ್ಲ. ಕೃಷ್ಣೇಗೌಡರ ಬರೆದದ್ದನ್ನು ಓದಿದ ಮೇಲೆ ಅವಳ ಇಷ್ಟು ಕಷ್ಟಪಡುತ್ತಿದ್ದಾಳೆ ಅನಿಸಿತು. 

ತಂದೆಯವರನ್ನು ಕಳೆದುಕೊಂಡ ಬಳಿಕ ತುಂಬಾ ತೊಂದರೆ ಅನುಭವಿಸಿದೆ. ಅವತ್ತಿಂದ ಸಾಲದಲ್ಲಿಯೇ ಬದುಕಿದೆ. ಹಿಂದೆ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದವರಿಗೂ ಒಳ್ಳೆಯದು ಮಾಡಿದ್ದೇನೆ. ಯಾವತ್ತೂ ಯಾರನ್ನೂ ದ್ವೇಷ ಮಾಡಿಲ್ಲ. ಬಡವರ ಕಣ್ಣೀರು ಒರೆಸುವುದು ದೇವರ ಕೆಲಸವೆಂದು ಮಾಡುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುತ್ತೇನೆ ಎಂದು ಹೇಳಿದರು.