ಮೈಸೂರು : ನಗರದ ಹೆಬ್ಬಾಳದಲ್ಲಿರುವ ಬಸವನಗುಡಿ ಪಾರ್ಕಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟು ಅನುಮತಿ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಭೀಮ್‌ಸೇನೆ ವತಿಯಿಂದ ಸೋಮವಾರ ಮೈಸೂರು ಮಹಾನಗರಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ರಾಜ್ಯಾಧ್ಯಕ್ಷ ಸರ್ವೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರಪಾಲಿಕೆಯು ದಲಿತರಿಗೆ ಮಲತಾಯಿ ಧೋರಣೆ ತೋರುತ್ತಿದೆ, ಇದೇ ಪಾರ್ಕಿನಲ್ಲಿ ಇನ್ನಿತರ ದಾರ್ಶನಿಕರು, ಸ್ವಾಮೀಜಿಗಳ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಆದರೇ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಸರ್ವೇಶ್ ಮಾತನಾಡಿ, ಇದೇ ಪಾರ್ಕಿನ ಸಮೀಪದಲ್ಲಿ ರಾಷ್ಟ್ರಕವಿ ಕುವೆಂಪು ಪುತ್ಥಳಿ ಇದೆ, ಶ್ರೀ ಬಾಲಗಂಗಾಧರನಾಥಸ್ವಾಮಿ ಅವರ ಪುತ್ಥಳಿ ಇದೆ, ಪುನಿತ್ ರಾಜಕುಮಾರ್ ಹೆಸರಲ್ಲಿ ಯೋಗಮಂಟಪವನ್ನು ಕಟ್ಟಲಾಗಿದೆ. ಇದಕ್ಕೆಲ್ಲಾ ಪಾಲಿಕೆ ಅನುದಾನ ನೀಡಿದೆ.
ಮಹಾನಗರಪಾಲಿಕೆಯವರು ಅನುಮತಿ ನೀಡಿ ಪುತ್ಥಳಿ ನಿರ್ಮಾಣ ಮಾಡಲು ಸಹಕಾರ ಆದರೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕ ಅವರ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿದರೆ ಸುಪ್ರೀಂ ಕೋರ್ಟ್ ಆದೇಶ ತೋರುತ್ತೀರಿ, ಇಷ್ಟೆಲ್ಲ ಪುತ್ಥಳಿ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ಅಡ್ಡ ಬರಲಿಲ್ಲವೇ, ಇಂತಹ ಮಲತಾಯಿ ಧೋರಣೆ ಮುಂದುವರಿದರೆ ನಿರಂತರವಾಗಿ ಪಾಲಿಕೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸೀಫ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪಡೆದು, ಕಾನೂನು ರೀತ್ಯಾ ಕ್ರಮ ಕೈಗೊಳ್ಳುತ್ತೇವೆ. ಅದಕ್ಕೂ ಮುನ್ನ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಭೀಮ್ ಸೇನೆಯ ಪದಾಧಿಕಾರಿಗಳಾದ ಪದ್ಮಾವತಿ, ನಾಗನಹಳ್ಳಿ ರೇವಣ್ಣ, ಧರ್ಮರಾಜು, ಕಾರ್ತಿಕ್ ಮರಿಯಪ್ಪ, ಚಂದ್ರಶೇಖರ್, ಫಾಮಿದಾ, ಶಾಬಾಜ್, ತಬರೇಜ್, ಸಿಂಧುವಳ್ಳಿ ಅಕ್ಬರ್, ಧರ್ಮರಾಜು, ಸಿದ್ದರಾಜು, ಗೋವಿಂದರಾಜು, ಮೊಹಮ್ಮದ್ ಶಫಿ, ಎಂ.ಮಹದೇವ್, ಶೇಕುನ್ ಇತರರು ಇದ್ದರು.

