ಮೈಸೂರು : ಯಾವುದೇ ರೀತಿಯ ಅಪಘಾತದ ಸಂದರ್ಭದಲ್ಲಿ ವ್ಯಕ್ತಿಗೆ ತಲೆಗೆ ತೀವ್ರಪೆಟ್ಟು ಬಿದ್ದಾಗ, ಹೃದಯಾಘಾತ ಉಂಟಾದಾಗ ಅಥವಾ ಪಾರ್ಶ್ವವಾಯು ಬಡಿದಾಗ ಕೂಡಲೇ ವ್ಯಕ್ತಿಯನ್ನು ಆಸ್ಪತೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಪ್ರಾಣ ಉಳಿಸಬಹುದು ಎಂದು ಮಣಿಪಾಲ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ಮಕ್ಸೂದ್ ಅಹಮದ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳು ಮತ್ತು ತಕ್ಷಣ ನೀಡಬೇಕಾದ ವೈದ್ಯಕೀಯ ಚಿಕಿತ್ಸೆಯ ಮಹತ್ವ ಕುರಿತು ಮಣಿಪಾಲ್ ಆಸ್ಪತ್ರೆ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಸ್ಥಳದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಯಾರಿಗಾದರೂ ಸರಿ ಹೃದಯಾಘಾತ ಅಥವಾ ಪಾರ್ಶ್ವವಾಯು ಸಂಭವಿಸಬಹುದು. ಅಂತಹ ಸಂದರ್ಭದಲ್ಲಿ ರೋಗಿಯ ತುರ್ತು ಪರಿಸ್ಥಿತಿಯ ಗುಣಲಕ್ಷಣಗಳನ್ನು ಶೀಘ್ರವಾಗಿ ಗುರುತಿಸಿಸುವುದು ಮುಖ್ಯವಾಗಿದೆ. ಇದರಿಂದ ರೋಗಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೆ ಪ್ರಾಣಾಪಾಯ ತಪ್ಪಬಹುದು. ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ, ಪಾರ್ಶ್ವವಾಯು ಸಂಬಂದಿ ಮತ್ತು ನ್ಯೂರೊ ಸರ್ಜರಿ ಸಂಬಂಧ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಹೊಂದಿರುವುದಲ್ಲದೇ, ನುತಿತ ತಜ್ಞ ವೈದ್ಯರು ಸದಾಕಾಲ ಲಭ್ಯರಿರುತ್ತಾರೆ. ಇದರಿಂದ ರೋಗಿಯ ಪ್ರಾಣ ಉಳಿಸಬಹುದು. ಮಣಿಪಾಲ್ ಆಸ್ಪತ್ರೆಯಲ್ಲಿ ಸುಸಜ್ಜಿತ ಆಂಬುಲೆನ್ಸ್ ಸೌಲಭ್ಯವೂ ಇದೆ. ಅಲ್ಲಿಂದಲೇ ಚಿಕಿತ್ಸೆ ಪ್ರಾರಂಭವಾಗುತ್ತದೆ ಎಂದು ವಿವರಿಸಿದರು.
ಅಪಘಾತದಲ್ಲಿ ತಲೆಗೆ ಪೆಟ್ಟಾದಾಗ ತೀವ್ರ ರಕ್ತಸ್ರಾವವಾಗಿ ಲೋ ಬಿಪಿ ಯಿಂದ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಅದೇ ರೀತಿ ಹೃದಯಾಘಾತವಾದಗಲೂ ಹೃದಯಕ್ಕೆ ರಕ್ತ ಸಂಚಾರ ಕಡಿಮೆಯಾಗಿ ಸಾವು ಸಂಭವಿಸಬಹುದು, ಇನ್ನು ಪಾರ್ಶ್ವವಾಯು ಬಡಿದಾಗಲೂ ಮೆದುಳಿಗೆ ರಕ್ತ ಸಂಚಾರ ನಿಂತು ಮೆದುಳು ನಿಷ್ಕ್ರಿಯ ಆಗಬಹುದು ಇಂತಹ ಸಂದರ್ಭದಲ್ಲಿ ನಿಗದಿತ ಗೋಲ್ಡನ್ ಹವರ್ ಒಳಗೆ ವ್ಯಕ್ತಿಯನ್ನು ಕೂಡಲೇ ಸುಸಜ್ಜಿತ ಸೌಲಭ್ಯಗಳುಳ್ಳ ಆಸ್ಪತ್ರೆಗೆ ದಾಖಲಿಸಿದರೆ ರೋಗಿಯ ಪ್ರಾಣ ಉಳಿಸಬಹುದು ಎಂದು ಹೇಳಿದರು.
ಕೆಲವರಿಗೆ ಪಾರ್ಶ್ವವಯು ಬಡಿಯುವ ಮುನ್ಸೂಚನೆ ಸಿಗುತ್ತದೆ. ತುಟಿಗಳು ಅದುರುವುದು, ಬಾಯಿ ತೊದಲುವುದು, ಕೈ ಕಾಲು ಜುಂ ಹಿಡಿದಂತೆ ಆಗುವುದು. ಕೈಯಲ್ಲಿ ಹಿಡಿದ ವಸ್ತು ನಿಯಂತ್ರಣ ತಪ್ಪಿ ಬೀಳಬಹುದು. ಇದು ಪಾರ್ಶ್ವವಾಯು ಬಡಿಯುವ ಮುನ್ಸೂಚನೆ. ಕೆಲವರಿಗೆ ಒಂದೆರಡು ನಿಮಿಷ ಇಂತಹ ತೊಂದರೆ ಉಂಟಾಗಿ ನಂತರ ಸರಿ ಹೋಗಬಹುದು. ಆದರೇ, ಈ ಬಗ್ಗೆ ನಿರ್ಲಕ್ಷ್ಯ ಮಾಡದೆ ಕೂಡಲೇ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯಬೇಕು ಎಂದರು.
ಸಾರ್ವಜನಿಕರು ದಿನನಿತ್ಯ ವ್ಯಾಯಾಮ ಮಾಡಬೇಕು. ತಂಬಾಕು, ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸೀನಿಯರ್ ಕಾರ್ಡಿಯಾಲಜಿಸ್ಟ್‌ಗಳಾದ ಡಾ.ಸಿ.ಬಿ.ನರಸಿಂಹಮೂರ್ತಿ, ಡಾ.ಉಪೇಂದ್ರ ಶೆಣೈ, ಆಸ್ಪತ್ರೆಯ ನಿರ್ದೇಶಕರಾದ ಬಿ.ಜೆ.ಸಂದೀಪ್ ಪಟೇಲ್ ಇದ್ದರು.
