ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು/ಶ್ರೀರಂಗಪಟ್ಟಣ : ಮಾಜಿ ಸಚಿವ, ಕೆಪಿಸಿಸಿ ಕಾರ್ಯಧ್ಯಕ್ಷರೂ ಆದ ತನ್ವೀರ್ ಸೇಠ್ ಅವರಿಗೆ ಡಿ.ಕೆ.ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬೇಕೆಂದು ಕಾಂಗ್ರೆಸ್ ಮುಖಂಡ ಎಂ.ರಸೂಲ್ ಅವರು ಮಂಗಳವಾರ ಸಂಜೆ ಶ್ರೀರಂಗಪಟ್ಟಣದ ಗುಂಬಜ್‌ನಲ್ಲಿರುವ ಟೀಪೂ ಸುಲ್ತಾನರ ಸಮಾಧಿಗೆ ಹೂವಿನ ಚಾದರ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಂಗಳವಾರ ಸಂಜೆ ಭಾರಿ ಮಳೆಯಲ್ಲಿಯೂ ಅವರು ತಮ್ಮ ಗೆಳೆಯರು ಮತ್ತು ಅಭಿಮಾನಿಗಳ ಜತೆಗೂಡಿ ಗುಂಬಜ್‌ಗೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ತನ್ವೀರ್ ಸೇಠ್ ಅವರು ಒಬ್ಬ ದಕ್ಷ, ಪ್ರಾಮಾಣಿಕ ನಾಯಕರು, ಈ ಹಿಂದೆ ಅವರು ಶಿಕ್ಷಣ ಸಚಿವರಾಗಿದ್ದಾಗ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಶಿಕ್ಷಣದಲ್ಲಿ ಹಿಂದೆ ಉಳಿದಿದ್ದ ಎನ್.ಆರ್.ಕ್ಷೇತ್ರದಲ್ಲಿ ಸಾಕಷ್ಟು ಸರ್ಕಾರಿ ಕಾಲೇಜುಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿ ಮೂಡಿಸಿದ್ದಾರೆ. ಅಲ್ಲದೇ ಸಾಕಷ್ಟು ಅಭಿವೃದ್ಧಿ ಮಾಡಿರುವ ಅಜಾತ ಶತೃವಾಗಿದ್ದಾರೆ. 

ಕ್ಷೇತ್ರದಲ್ಲಿ ಎಲ್ಲ ಜಾತಿ, ಧರ್ಮಗಳ ಜನರನ್ನು ಒಟ್ಟುಗೂಡಿಸಿಕೊಂಡು ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದಾರೆ. ಎನ್.ಆರ್.ಕ್ಷೇತ್ರದಲ್ಲಿ ಸತತವಾಗಿ ಆರು ಬಾರಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಇಂತಹವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದರೆ, ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆ ಕಾಣಬಹುದು. ಈ ಕಾರಣಕ್ಕಾಗಿ ಅವರಿಗೆ ಸಚಿವ ಸ್ಥಾನ ಸಿಗಲೆಂದು ಟೀಪೂ ಸುಲ್ತಾನ್ ಅವರ ಸಮಾಧಿಗೆ ಹೂವಿನ ಚಾದರ ಅರ್ಪಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುಹೇಲ್ ಬೇಗ್ ಇತರರು ಇದ್ದರು.