ಮೈಸೂರು: ಇಲವಾಲ ಹೋಬಳಿ ದಡದ ಕಲ್ಲಹಳ್ಳಿ ಗ್ರಾಮದ ಈಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ತೀರಾ ಕಿರಿದಾಗಿರುವ ಕಾರಣ ಗ್ರಾಮಸ್ಥರೆಲ್ಲ ಮಾಡಿಕೊಂಡ ಮನವಿ ಮೇರೆಗೆ ಗ್ರಾಮದಲ್ಲಿ ೧.೨೦ ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆಗೆ ಮಂಜೂರು ಮಾಡಿದ್ದಾರೆ. ಹೀಗಾಗಿ ಡಿಡಿಪಿಐ ಮತ್ತು ಬಿಇಓ ಅದನ್ನು ಸಂರಕ್ಷಿಸಿಕೊಂಡು ಶಾಲೆ ಅಭಿವೃದ್ಧಿಗೊಳಿಸಬೇಕೆಂದು ಯಾಚೇನಹಳ್ಳಿಯ ಸಾಮಾಜಿಕ ಹೋರಾಟಗಾರ ರವಿಕುಮಾರ್ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈಗಿರುವ ಶಾಲೆಗೆ ಆಟದ ಮೈದಾನ ಸಹಾ ಇಲ್ಲ. ಹೀಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ಸೌಕರ್ಯ ಒದಗಿಸಲು ವಿಸ್ತಾರವಾದ ಜಾಗ ಬೇಕೆಂದು ಕೋರಲಾಗಿತ್ತು. ಅದರಂತೆ ಜಾಗ ಮಂಜೂರು ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಗ್ರಾಮಸ್ಥರ ಸಹಕಾರದಿಂದ ಶಾಲೆ ಅಭಿವೃದ್ಧಿಗೊಳಿಸಬೇಕೆಂದು ಕೋರಿದರು.
ಈ ಕಾರ್ಯಕ್ಕೆ ಮೈಸೂರು ತಹಸೀಲ್ದಾರ್, ಉಪ ವಿಭಾಗಾಧಿಕಾರಿ, ಗ್ರಾಮದ ಪುಟ್ಟಸ್ವಾಮಿ, ಯೋಗಮೂರ್ತಿ, ವೀರಭದಸ್ವಾಮಿ, ದಿಲೀಪ್ ಹಾಗೂ ಇನ್ನಿತರರು ಸಹಕರಿಸಿದರೆಂದು ಸ್ಮರಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಭದ್ರಸ್ವಾಮಿ, ರಾಘವೇಂದ್ರ ಇದ್ದರು.


