ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿ ಲಿವರ್ ಟ್ರಾನ್ಸ್‌ಪ್ಲಾಂಟ್ : ಒಂದೇ ತಿಂಗಳಲ್ಲಿ ಮೂವರಿಗೆ ಯಶಸ್ವಿ ಚಿಕಿತ್ಸೆ, ಇತಿಹಾಸ ನಿರ್ಮಿಸಿದ ಮೈಸೂರಿನ ಮಣಿಪಾಲ್ ಆಸ್ಪತ್ರೆ

 

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಒಂದೇ ತಿಂಗಳಲ್ಲಿ ಮೂವರು ರೋಗಿಗಳಿಗೆ ಯಶಸ್ವಿಯಾಗಿ ಲಿವರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ನೀಡುವ ಮೂಲಕ ಮೈಸೂರಿನ ಮಣಿಪಾಲ್ ಆಸ್ಪತ್ರೆ ಇತಿಹಾಸ ನಿರ್ಮಿಸಿದೆ ಎಂದು ಲೀಡ್ ಕನ್ಸಲ್ಟೆಂಟ್ ಹೆಚ್‌ಪಿಬಿ ಲೀವರ್ ಮತ್ತು ಪ್ಯಾಂಕ್ರಿಯಾಟಿಕ್ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ.ಜಯಂತ್ ರೆಡ್ಡಿ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಮೊದಲ ಲಿವರ್ ಟ್ರಾನ್ಸ್‌ಪ್ಲಾಂಟ್‌ನಿಂದ ಒಂದೇ ತಿಂಗಳಲ್ಲಿ ಮೂರು ಯಶಸ್ವಿ ಲಿವರ್ ಟ್ರಾನ್ಸ್‌ಪ್ಲಾಂಟ್ ಮಾಡುವ ಮೂಲಕ ಮಣಿಪಾಲ್ ಆಸ್ಪತ್ರೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದಕ್ಕೆ ನಮ್ಮ ಆಸ್ಪತ್ರೆಯಲ್ಲಿ ದೊರಕುವ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯಗಳು ಮತ್ತು ನುರಿತ ವೈದ್ಯರು ಮತ್ತು ಸಿಬ್ಬಂದಿಗಳ ತಂಡ ಕಾರಣವಾಗಿದೆ ಎಂದರು.

ಲಿವರ್ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಾಗ, ಲಿವರ್ ಕಸಿ (ಟ್ರಾನ್ಸ್‌ಪ್ಲಾಂಟ್) ಮಾಡಿಸುವುದು ಅತ್ಯಂತ ಪರಿಣಾಮಕಾರಿ ಮತ್ತು ಖಚಿತವಾದ ಚಿಕಿತ್ಸೆಯಾಗಿದೆ. ಸೂಕ್ತ ಸಮಯದಲ್ಲಿ ರೋಗ ಪತ್ತೆ ಹಚ್ಚುವುದು, ವಿಶೇಷ ಟ್ರಾನ್ಸ್‌ಪ್ಲಾಂಟ್ ವ್ಯವಸ್ಥೆಯ ಲಭ್ಯತೆ ಮತ್ತು ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರದ ಸಮಗ್ರ ಆರೈಕೆಯು ರೋಗಿಗೆ ಹೊಸ ಆಯುಷ್ಯ ನೀಡುವಲ್ಲಿ ಹಾಗೂ ಉತ್ತಮ ಜೀವನದ ಗುಣಮಟ್ಟವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೈಸೂರು ಸುತ್ತಮುತ್ತಲಿನ ರೋಗಿಗಳಿಗೆ ಅವರ ಮನೆಯ ಹತ್ತಿರವೇ ಇಂತಹ ಅತ್ಯಾಧುನಿಕ ಕಸಿ ಚಿಕಿತ್ಸೆಗಳು ಲಭ್ಯವಾದರೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದು, ಗುಣಮುಖರಾಗುವವರೆಗೂ ಅತ್ಯುತ್ತಮ ಆರೈಕೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದರು. 

"ಯಾವ ಔಷಧಿಗಳೂ ಕೆಲಸ ಮಾಡದಿದ್ದಾಗ ಲಿವರ್ ಕಸಿ ಒಂದೇ ರೋಗಿಯ ಜೀವ ಉಳಿಸುವ ದಾರಿ. ಪ್ರತಿ ಸರ್ಜರಿಯೂ ವಿಭಿನ್ನ ಮತ್ತು ಸವಾಲಿನಿಂದ ಕೂಡಿರುತ್ತದೆ. ಹಾಗಾಗಿ ಲಿವರ್ ಕೊಡುವವರು ಮತ್ತು ಪಡೆಯುವವರ ಆರೋಗ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ವೈದ್ಯರ ತಂಡ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಈ ಯಶಸ್ವಿ ಚಿಕಿತ್ಸೆಗಳಿಂದಾಗಿ ಮೈಸೂರು ಸುತ್ತಮುತ್ತಲಿನ ಜನರಿಗೆ ಇನ್ನು ಮುಂದೆ ತಮ್ಮ ಮನೆಯ ಹತ್ತಿರವೇ ಅತ್ಯಾಧುನಿಕ ಲಿವರ್ ಕಸಿ ಸೌಲಭ್ಯ ಸಿಗುವಂತಾಗಿದೆ," ಎಂದರು.

ಕನ್ಸಲ್ಟೆಂಟ್ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ನಿಶ್ಚಯ್ ಆರ್., ಮಾತನಾಡಿ,

"ಯಾವುದೇ ಲಿವರ್ ಕಸಿ ಚಿಕಿತ್ಸೆ ಯಶಸ್ವಿಯಾಗಬೇಕಾದರೆ ಮೊದಲು ರೋಗಿಗಳಿಗೆ ವೈದ್ಯರ ತಂಡದ ಮೇಲೆ ನಂಬಿಕೆ ಇರಬೇಕು. ನಮ್ಮ ಮೇಲೆ ಭರವಸೆ ಇಟ್ಟು, ಅವರ ಜೀವ ಉಳಿಸುವ ಈ ಪ್ರಯಾಣದಲ್ಲಿ ನಮ್ಮನ್ನು ಭಾಗಿಯಾಗುವಂತೆ ಮಾಡಿದ ನಮ್ಮ ಮೊದಲ ರೋಗಿ ಮತ್ತು ಅವರ ಕುಟುಂಬಕ್ಕೆ ನಾವು ಚಿರಋಣಿ. ಅವರ ಈ ಧೈರ್ಯವೇ ಇತರ ರೋಗಿಗಳೂ ನಮ್ಮಲ್ಲಿಗೆ ಬರುವಂತೆ ಮಾಡಿತು. ಇದು ಈ ಭಾಗದಲ್ಲಿ ಅತ್ಯಾಧುನಿಕ ಲಿವರ್ ಕಸಿ ಸೇವೆಗಳು ಬೆಳೆಯಲು ದಾರಿಯಾಗಿದೆ," ಎಂದರು.

ಲೀಡ್ ಕನ್ಸಲ್ಟೆಂಟ್, ಮಲ್ಟಿ-ಆರ್ಗನ್ ಟ್ರಾನ್ಸ್‌ಪ್ಲಾಂಟ್ ಅನೆಸ್ತೇಷಿಯಾ ಡಾ. ನಾಗೇಶ್ ಪಿ. ಎನ್., ಮಾತನಾಡಿ, "ಲಿವರ್ ಕಸಿ ಯಶಸ್ವಿಯಾಗಲು ಬರೀ ಸರ್ಜರಿ ಮಾತ್ರ ಸಾಲದು. ಸುರಕ್ಷಿತವಾಗಿ ಅರವಳಿಕೆ ನೀಡುವುದು, ಸರ್ಜರಿ ಸಮಯದಲ್ಲಿ ರೋಗಿಯ ಆರೋಗ್ಯದ ಮೇಲೆ ನಿರಂತರ ನಿಗಾ ಇಡುವುದು ಮತ್ತು ವೈದ್ಯರ ತಂಡದ ಒಗ್ಗಟ್ಟಿನ ಕೆಲಸ ತುಂಬಾ ಮುಖ್ಯ. ರೋಗಿ ಬೇಗ ಗುಣಮುಖರಾಗಿ, ದೀರ್ಘಕಾಲ ಆರೋಗ್ಯವಾಗಿರಲು ಪ್ರತಿ ಹಂತದಲ್ಲೂ ಪೂರ್ಣ ನಿಗಾ ವಹಿಸಲಾಗುತ್ತದೆ," ಎಂದರು.

ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವುದರಿಂದ ಆಗುವ ಪ್ರಯೋಜನಕ್ಕೆ ಉದಾಹರಣೆಯಾಗಿ ವೈದ್ಯರು ಜಯರಾಮ್ ಪಿ. ಸಂಪತ್ ಅವರ ಕೇಸ್ ಹಂಚಿಕೊಂಡರು. ಮೈಸೂರಿನ ೬೧ ವರ್ಷದ ಜಯರಾಮ್ ಅವರಿಗೆ ’ಪ್ರೈಮರಿ ಸ್ಕ್ಲೆರೋಸಿಂಗ್ ಕೋಲಾಂಜೈಟಿಸ್’ ಎಂಬ ಕಾಯಿಲೆಯಿಂದಾಗಿ ಲಿವರ್ ಸಮಸ್ಯೆ ತೀವ್ರವಾಗಿ, ಹಠಾತ್ತನೆ ಕಾಮಾಲೆ (ಜಾಂಡೀಸ್) ಹೆಚ್ಚಾಗಿತ್ತು. ತಕ್ಷಣ ಅವರಿಗೆ ಲಿವರ್ ಕಸಿ ಮಾಡಿದ ಕಾರಣ, ಕೆಲವೇ ವಾರಗಳಲ್ಲಿ ಗುಣಮುಖರಾಗಿ ಅವರು ತಮ್ಮ ದೈನಂದಿನ ಕೆಲಸಗಳಿಗೆ ಮರಳಿದ್ದಾರೆ.

ಎಂದರಲ್ಲದೇ ಮತ್ತಿಬ್ಬರು ರೋಗಿಗಳ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಸೀನಿಯರ್ ಕನ್ಸಲ್ಟೆಂಟ್ - ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಡಾ.ಸತೀಶ್ ರಾವ್ ಎ.ಕೆ., ಸೀನಿಯರ್ ಕನ್ಸಲ್ಟೆಂಟ್ - ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಚ್.ಪಿ.ಬಿ ಸರ್ಜನ್ ಡಾ. ವಾಸುದೇವ್ ಪೈ ಎಚ್., ಚೀಫ್ ಆಫ್ ಮೆಡಿಕಲ್ ಸರ್ವಿಸಸ್ ಡಾ. ಉಪೇಂದ್ರ ಶೆಣೈ, ಐಸಿಯು ಮತ್ತು ಕ್ರಿಟಿಕಲ್ ಕೇರ್ ವಿಭಾಗದ ಡಾ. ಮಹಾದೇವ ಮಣಿಪಾಲ್ ಆಸ್ಪತ್ರೆ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ., ಇತರರು ಇದ್ದರು.