ಅಹಿಂದಾ ನಾಯಕರಾದ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆ ಡಿಸಿಎಂ ಮಾಡಬೇಕೆಂದು ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಅಧ್ಯಕ್ಷ ದ್ಯಾವಪ್ಪ ನಾಯಕ ಆಗ್ರಹ

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಅಹಿಂದಾ ಸಮುದಾಯದ ನಾಯಕರು, ಮಾಜಿ ಸಚಿವರೂ ಆದ ಸತೀಶ್ ಜಾರಕಿಹೊಳಿ ಅವರಿಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರ ಜತೆಗೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂದು ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟ ಆಗ್ರಹಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಅಧ್ಯಕ್ಷ ದ್ಯಾವಪ್ಪ ನಾಯಕ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ರಾಜ್ಯದ ಪ್ರಶ್ನಾತೀತ ನಾಯಕರು, ಆಹಿಂದ ಮತ್ತು ಶೋಷಿತ ಸಮುದಾಯಗಳ ಪರವಾಗಿ ಸುಮಾರು ೩೦ ವರ್ಷಗಳಿಂದ ನಿರಂತರವಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿರುವ ರಾಜ್ಯದ ಏಕೈಕ ನಾಯಕರಾಗಿದ್ದಾರೆ. 

ರಾಜಕೀಯ ಕ್ಷೇತ್ರಕ್ಕೆ ಮಾತ್ರ ಇವರು ಸೀಮಿತವಾಗದೆ, ಸಾಮಾಜಿಕವಾಗಿಯೂ ತಮ್ಮ ಸ್ವಂತ ಹಣದಿಂದ ಹಲವಾರು ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ವಿವಿಧ ರೀತಿಯ ತರಬೇತಿಗಳನ್ನು ನೀಡುವ ಮೂಲಕ ಹಲವಾರು ಯುವಕರಿಗೆ ಉದ್ಯೋಗ ದೊರಕಿಸಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೂ ರಾಜ್ಯದಲ್ಲಿ ನಿರಂತರವಾಗಿ ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಯಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದು, ಸತೀಶ್ ಜಾರಕಿಹೊಳಿ ಅವರು ರಾಜ್ಯದ ಆಹಿಂದ ವರ್ಗದ ಏಕೈಕ ನಾಯಕ ಎಂದರು.

೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ೧೫ ಮೀಸಲು ಕ್ಷೇತ್ರಗಳಲ್ಲಿ ೧೪ ಕ್ಷೇತ್ರಗಳನ್ನು ಗೆಲ್ಲುವು ಮೂಲಕ ಹಾಗೂ ಒಂದು ಸಾಮಾನ್ಯ ಕ್ಷೇತ್ರದಲ್ಲಿಯೂ ಸಹಾ ಜಯಗಳಿಸಿ ಒಟ್ಟು ೧೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಸಾಧಿಸಲು ಹಾಗೂ ೩ ಲೋಕಸಭಾ ಕ್ಷೇತ್ರದಲ್ಲಿ ನಾಯಕ ಸಮುದಾಯದವರು ಗೆಲ್ಲಲು ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ. ಜೊತೆಗೆ ಬಾಗಲಕೋಟೆ, ಹಾಗೂ ಶಿಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ಶ್ರಮವಹಿಸಿದ್ದಾರೆ. ಹೀಗೆ ನಿರಂತರವಾಗಿ ಶೋಷಿತ ಸಮುದಾಯಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸತೀಶ್ ಜಾರಕಿಹೊಳಿರವರಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷರೂ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೇ, ನಮ್ಮ ಸಮುದಾಯ ಇನ್ನು, ಹೆಚ್ಚಿನ ರೀತಿಯಲ್ಲಿ ಸತೀಶ್ ಜಾರಕಿಹೊಳಿರವರನ್ನು ಬೆಂಬಲಿಸಲು ಅನುಕೂಲವಾಗುತ್ತದೆ. ಹಾಗೂ ಇದು ಪಕ್ಷ ಸಂಘಟನೆಗೂ ಸಹಕಾರಿಯಾಗುತ್ತದೆ. ಆದ್ದರಿಂದ ಶೋಷಿತ ಸಮುದಾಯದ ಪರವಾಗಿರುವಂತ ಆಹಿಂದ ನಾಯಕ ಶ್ರೀ ಸತೀಶ್ ಜಾರಕಿಹೊಳಿರವರಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಅಲ್ಲದೇ ನೂತನ ಸಚಿವ ಸಂಪುಟದಲ್ಲಿ ನಾಯಕ ಸಮುದಾಯಕ್ಕೆ ೩ ಸಚಿವರನ್ನು ಕೊಡುವ ಮೂಲಕ ಮೈಸೂರು ವಿಭಾಗದ ಏಕೈಕ ಶಾಸಕ ಅನಿಲ್ ಚಿಕ್ಕಮಾದು ಅವರಿಗೂ ಸಹಾ ಸಚಿವ ಸ್ಥಾನವನ್ನು ನೀಡುವ ಮೂಲಕ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ನೀಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಿಪ್ಪೂರು ಮಹಾದೇವ್, ವೆಂಕಟೇಶ್ ನಾಯಕ, ದೇವರಾಜ್ ಪಾಳೇಗಾರ್, ಸುರೇಶ್ ಕುಮಾರಬೀಡು, ಜೆ.ಶಿವಣ್ಣ ಹೊಸರಾಮೇನಹಳ್ಳಿ, ನರಸಿಂಹನಾಯಕ, ಮುತ್ತುರಾಜ್, ಪುಟ್ಟರಾಜು ಇದ್ದರು.