ನಂಜನಗೂಡು: ನಂಜನಗೂಡು ತಾಲೂಕಿನ ಎಲ್ಲಾ ಗ್ರಾಮಗಳಿಗೂ ಸಮಗ್ರ ನೀರಾವರಿ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ
ಹಾಗೂ ತಾಲೂಕು ಆಡಳಿತದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಜೂ.8ರಂದು ಬೆಳಗ್ಗೆ 11 ಗಂಟೆಗೆ ಅನಿರ್ದಿಷ್ಟಾವಧಿ ಬೃಹತ್ ಬಾರುಕೋಲು ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಕಾರ್ಯದರ್ಶಿ ಸೈಯದ್ ಮುತಿ ಉರ್ ರಹಮಾನ್ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಜೂನ್ 8ರ ಬೆಳಿಗ್ಗೆ 11 ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಪಾದಯಾತ್ರೆ ಮೂಲಕ ತಾಲೂಕು ಕಚೇರಿಯ ಆವರಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಗುವುದು. ನಂತರ ತಾಲೂಕು ಕಚೇರಿಯ ಮುಂಭಾಗ ಅನಿರ್ದಿಷ್ಟ ಅವಧಿ ಬೃಹತ್ ಧರಣಿಯನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ನಂಜನಗೂಡು ತಾಲೂಕಿನ 5 ಹೋಬಳಿಗಳಿಗೆ ಸಮಗ್ರ ನೀರಾವರಿ ಸೌಕರ್ಯ ಕಲ್ಪಿಬೇಕು. ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ರೈತ ವಿರೋಧಿ ಭ್ರಷ್ಟ ಆಡಳಿತವನ್ನು ತೊಲಗಿಸಬೇಕು, ತಾಲ್ಲೂಕು ಪಂಚಾಯಿಯಲ್ಲೂ ಸಹ ರೈತರ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ವರ್ಷಾನುಗಟ್ಟಲೆ ಅಲೆಸುತ್ತಾರೆ. ಇದಕ್ಕೆ ಕಡಿಮಾಣ ಹಾಕಬೇಕು. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಪೂರೈಕೆ ಮಾಡುವ ಪ್ರತಿ ಟನ್ ಕಬ್ಬಿಗೆ 4,500ಗಳನ್ನು ನಿಗದಿಪಡಿಸಬೇಕು. ಕಬ್ಬಿನ ಬಾಕಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಖಾಯಂ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಭೌತಿಕವಾಗಿ ಉಳುಮೆ ಮಾಡುತಿರುವ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು. ವಿದ್ಯುತ್ ಖಾಸಗೀಕರಣ ಕೈಬಿಡಬೇಕು, ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಈ ಪ್ರತಿಭಟನೆಯು ರೈತ ಸಂಘದ ಕಾರ್ಯಾಧಕ್ಷ ವಿದ್ಯಾಸಾಗರ್, ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಮೈಸೂರು ಜಿಲ್ಲಾ ಅಧ್ಯಕ್ಷ ಸತೀಶ್ ರಾವ್ ನೇತೃತ್ವದಲ್ಲಿ ನಡೆಯಲಿದ್ದು, ಪ್ರತಿಭಟನೆಯಲ್ಲಿ ಮುಖಂಡರಾದ ದೇವರಾಜು, ಕುಮಾರ್ ಬಸಪ್ಪ, ಬಿಪಿನ್ ಕುಮಾರ್, ಶಂಕರ್ ನಾಯಕ್ ಸೇರಿದಂತೆ ಹಲವಾರು ರೈತ ಮುಖಂಡರು ಮತ್ತು ಸಾವಿರಾರು ಸಂಖ್ಯೆಯ ರೈತರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ರೈತರು ಮತ್ತು ಸಾರ್ವಜನಿಕರು ಆಗಮಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಸೈಯದ್ ಮುತಿ ಉರ್ ರಹಮಾನ್ ಮನವಿ ಮಾಡಿದರು.
