ಮೈಸೂರು : 10.5 ಲಕ್ಷ ರೂ ಮನೆ ಕಟ್ಟಲು ಸಾಲ ನೀಡಿ, ಇದಕ್ಕೆ 14.5 ಲಕ್ಷ ರೂ ಬಡ್ಡಿ ಹಾಕಿದ ಜನಸ್ಮಾನ್ ಫೈನಾನ್ಸ್ ವಿರುದ್ಧ ರೈತಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಕೆಡಿ ರಸ್ತೆಯ ಸಿಗ್ನಲ್ ಜಂಕ್ಷನ್ ಬಳಿ ಇರುವ ಜನಸ್ಮಾಲ್ ಫೈನಾನ್ಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತಸಂಘದ ನೂರಾರು ಕಾರ್ಯಕರ್ತರು ಫೈನಾನ್ಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಮೈಸೂರು ತಾಲ್ಲೂಕು ಅಧ್ಯಕ್ಷರಾದ ಪ್ರಭಾಕರ್ ಅವರು ಮಾತನಾಡಿ, ತಾಲ್ಲೂಕಿನ ಹಳೇ ರಾಮನಹಳ್ಳಿಯ ರೈತ ಸಿದ್ದರಾಜು ಎಂಬವರು 5 ವರ್ಷದ ಹಿಂದೆ ಜನಸ್ಮಾಲ್ ಫೈನಾನ್ಸ್ನ ಸೇಲ್ಸ್ ವಿಭಾಗದ ಹುಡುಗರ ಮಾತಿಗೆ ಮರುಳಾಗಿ ಮನೆ ಕಟ್ಟಲು 10.5 ಲಕ್ಷ ರೂ ಸಾಲ ಪಡೆದಿದ್ದರು. ಇದರಲ್ಲಿ ಅವರಿಗೆ ಸಿಕ್ಕಿದ್ದು 9.80 ಲಕ್ಷ ರೂ ಮಾತ್ರ ಉಳಿದ 70 ಸಾವಿರ ರೂ. ಪ್ರೋಸೆಸಿಂಗ್ ಚಾರ್ಜ್ ಎಂದು ಕಡಿತ ಮಾಡಲಾಯಿತು. ಸಾಲ ಪಡೆದು ಸುಮಾರು 4 ವರ್ಷಗಳಾಗಿವೆ. ಈಗಾಗಲೇ ಸಿದ್ದರಾಜು ಅವರು 10.5 ಲಕ್ಷ ರೂ. ಹಣವನ್ನು ಫೈನಾನ್ಸ್ಗೆ ಪಾವತಿ ಮಾಡಿದ್ದಾರೆ. ಇನ್ನೂ 14.5 ಲಕ್ಷ ರೂ ಕಟ್ಟಿ ಇಲ್ಲವಾದರೆ ಮನೆ ಖಾಲಿ ಮಾಡಿ ಎಂದು ಬ್ಯಾಂಕಿನ ಸಿಬ್ಬಂದಿ ಸಿದ್ದರಾಜು ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಸಿದ್ದರಾಜು ಅವರು ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದರು, ಇದೀಗ ಚೇತರಿಸಿಕೊಂಡಿದ್ದಾರೆ. ಆದಾಗ್ಯೂ ಫೈನಾನ್ಸ್ ಸಿಬ್ಬಂದಿ ಪದೇ ಪದೇ ಸಿದ್ದರಾಜು ಅವರ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಮನೆಯಿಂದ ಹೊರ ಹಾಕುತ್ತೇವೆ ಎಂದು ಧಮಕಿ ಹಾಕುವುದು, ಮನೆ ಖಾಲಿ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಸಿದ್ದರಾಜು ಕುಟುಂಬ ಬಡ ರೈತರಾಗಿದ್ದು, ಇಷ್ಟೊಂದು ಬಡ್ಡಿಯನ್ನು ಭರಿಸುವ ಶಕ್ತಿ ಅವರಿಗಿಲ್ಲ, ನಾವು ಬಡ್ಡಿ ಕಡಿಮೆ ಮಾಡಿ ಎಂದು ಫೈನಾನ್ಸ್ನವರಿಗೆ ಪದೇ ಪದೇ ಮನವಿ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ, ಈ ಕಾರಣದಿಂದ ಫೈನಾನ್ಸ್ ಎದುರು ಪ್ರತಿಭಟನೆ ಕೈಗೊಂಡಿದ್ದೇವೆ. ಬಡ ಸಿದ್ದರಾಜುವಿನಿಂದ ಈಗಾಗಲೇ ಅಸಲು ಹಣ ಕಟ್ಟಿಸಿಕೊಂಡಿದ್ದಾರೆ. ಈತನ ಸಂಪೂರ್ಣ ಬಡ್ಡಿಯನ್ನು ಫೈನಾನ್ಸ್ನವರು ಮನ್ನಾ ಮಾಡಿ ಮನೆಯ ದಾಖಲೆಯನ್ನು ನೀಡಬೇಕು ಮತ್ತು ಸಾಲ ತೀರುವಳಿ ಪತ್ರವನ್ನೂ ಸಹ ಕೊಡಬೇಕು. ಇಲ್ಲದಿದ್ದಲ್ಲಿ ಫೈನಾನ್ಸ್ ಕಚೇರಿಯಿಂದ ನಾವು ಕದಲುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ಮಂಡಕಳ್ಳಿ ಮಹೇಶ, ಚಂದ್ರಶೇಖರ, ರಾಘವೇಂದ್ರ, ಉಮೇಶ ಮತ್ತಿತರರು ಇದ್ದರು.
ನಾವು ಮನೆಕಟ್ಟಲು ಜನಸ್ಮಾಲ್ ಫೈನಾನ್ಸ್ನಿಂದ 9.80 ಲಕ್ಷ ರೂ. ಸಾಲ ಪಡೆದಿದ್ದು, 10.5 ಲಕ್ಷ ರೂ. ಪಾವತಿ ಮಾಡಿದ್ದೇವೆ, ನನಗೆ ಅಪಘಾತವಾಗಿ ಕೋಮಾ ಸ್ಥಿತಿಯಲ್ಲಿದ್ದು, ಇದೀಗ ಚೇತರಿಸಿಕೊಂಡಿದ್ದೇನೆ. ಫೈನಾನ್ಸ್ ಸಿಬ್ಬಂದಿಗಳು ಇನ್ನೂ 14.5 ಲಕ್ಷ ರೂ ಬಾಕಿ ಇದೆ. ಹಣ ಕಟ್ಟಿ ಇಲ್ಲವಾದರೆ ಮನೆ ಖಾಲಿ ಮಾಡಿ ಎಂದು ಒತ್ತಡ, ಬೆದರಿಕೆ, ಹಾಕುತ್ತಿದ್ದಾರೆ. ನಮಗೆ ಇಷ್ಟೊಂದು ಬಡ್ಡಿ ಕಟ್ಟಲು ಸಾಧ್ಯವಿಲ್ಲ, ನಮಗೆ ನ್ಯಾಯ ಬೇಕು.
• ಸಿದ್ದರಾಜು, ಮತ್ತು ಅವರ ಪತ್ನಿ ನೊಂದವರು


