ಮೈಸೂರಿನ ಉತ್ತಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಆವರಣದಲ್ಲಿ ಮೇ, 28 ಮತ್ತು 29 ರಂದು ಶತ ಚಂಡಿಕಾ ಯಾಗ

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಶ್ರೀ ಸರ್ವ ಮಂಗಳಾ ದೇವಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಉತ್ತಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಆವರಣದಲ್ಲಿ ಮೇ,28 ಮತ್ತು 29 ರಂದು ಎರಡು ದಿನಗಳ ಕಾಲ ಶತ ಚಂಡಿಕಾ ಯಾಗ ಏರ್ಪಡಿಸಲಾಗಿದೆ ಎಂದು ಶ್ರೀ ಅರುಣ್ ಗುರೂಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸನಾತನ ಧರ್ಮದಲ್ಲಿ ಯಾಗ-ಯಜ್ಞಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಅವು ಮಾನವನ ಆತ್ಮಿಕ ಉನ್ನತಿ, ಮನಃಶಾಂತಿ, ದೈವಾನುಗ್ರಹ ಮತ್ತು ಲೋಕಕ್ಷೇಮಕ್ಕೆ ದಾರಿಯಾಗುವ ಮಹತ್ವದ ವೇದೋಕ್ತ ಕರ್ಮಗಳಾಗಿವೆ. ಅಂತಹ ಮಹಾನ್ ಯಾಗಗಳಲ್ಲಿ ಶತಚಂಡಿಕಾ ಯಾಗ ಅತ್ಯಂತ ಶ್ರೇಷ್ಠವಾದದ್ದು. ಪರಾಶಕ್ತಿ ಸ್ವರೂಪಿಯಾದ ಶ್ರೀ ಚಂಡಿಕಾ ಪರಮೇಶ್ವರಿಯ ಆರಾಧನೆಗಾಗಿ ನೆರವೇರಿಸುವ ಈ ಮಹಾಯಾಗವು ಭಕ್ತಿ, ಶಕ್ತಿ ಮತ್ತು ಸಮರ್ಪಣೆಯ ಪರಮ ಪ್ರತೀಕವಾಗಿದೆ.

ದೇವೀ ಮಹಾತ್ಮದಲ್ಲಿ ವರ್ಣಿಸಲ್ಪಟ್ಟ ಶ್ರೀ ಚಂಡಿಕಾ ದೇವಿಯ ಮಹಿಮೆ, ದುಷ್ಟಶಕ್ತಿಗಳ ಸಂಹಾರ ಮತ್ತು ಶಿಷ್ಟರ ರಕ್ಷಣೆಯ ದಿವ್ಯ ಸಂದೇಶವನ್ನು ಸಾರುತ್ತದೆ. 700 ಶ್ಲೋಕಗಳನ್ನು 100 ಬಾರಿ ಪುನರಾವರ್ತನೆ ಜಪಿಸುವ ಮೂಲಕ ನಡೆಸುವ ಶತಚಂಡಿಕಾ ಯಾಗ ಹಾಗೂ ದುರ್ಗಾ ಸಪ್ತಶತಿ ಪಾರಾಯಣ, ಹೋಮ, ಪೂರ್ಣಾಹುತಿ ಮುಂತಾದ ಪವಿತ್ರ ವಿಧಿ ವಿಧಾನಗಳ ಮೂಲಕ ಈ ಯಾಗವನ್ನು ನೆರವೇರಿಸಲಾಗುತ್ತದೆ.

ಭಕ್ತರ ಸಕಲ ಸಂಕಲ್ಪಗಳು ಸಿದ್ಧಿಯಾಗಲಿ, ಸಮಾಜದಲ್ಲಿ ಶಾಂತಿ ನೆಲೆಸಲಿ ಹಾಗೂ ಸಕಲ ಜನರಿಗೆ ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ಲಭಿಸಲಿ ಎಂಬ ಶ್ರದ್ಧಾಭಾವನೆಯೇ ಈ ಮಹಾಯಾಗದ ಮೂಲ ಆಶಯವಾಗಿದೆ.

ಶತ ಚಂಡಿಕಾ ಯಾಗವು ಕೇವಲ ಒಂದು ಧಾರ್ಮಿಕ ಆಚರಣೆ ಮಾತ್ರವಲ್ಲ; ಅದು ಆಂತರಿಕ ಶುದ್ದೀಕರಣ, ದೈವಿಕ ಶಕ್ತಿ ಜಾಗೃತಿ ಹಾಗೂ ಸಮಸ್ತರ ಕಲ್ಯಾಣಕ್ಕಾಗಿ ಮಾಡುವ ಪುಣ್ಯಕರ ಸಮಪ್ರಣೆಯಾಗಿದೆ. ದೇವಿಯ ಅನುಗ್ರದಿಂದ ಸಕಲ ವಿಘ್ನಗಳು ದೂರವಾಗಿ ಶುಭ, ಸಮೃದ್ಧಿ ಮತ್ತು ವಿಜಯ ಜೀವನದಲ್ಲಿ ನೆಲೆಸಲೆಂದು ಈ ಮಹಾಯಾಗವನ್ನು ಭಕ್ತಿಭಾವದಿಂದ ನೆರವೇರಿಸಲಾಗುತ್ತದೆ ಎಂದರು.

ಮೇ.28 ರಂದು ಬೆಳಗ್ಗೆ 7 ಗಂಟೆಗೆ ಪುಣ್ಯಾಹ, ಗಣಪತಿ ಪೂಜೆ, ಕಲಶ ಸ್ಥಾಪನೆ, ಚಂಡಿ ಪಾರಾಯಣ, ಮೂಲ ಮಂತ್ರ ಜಪ, ಸಂಜೆ 7 ಗಂಟೆಗೆ ಲಲಿತ ಸಹಸ್ರನಾಮ ಅರ್ಚನೆ, ಅಷ್ಟವಾಧಾನ ಸೇವೆ ನಡೆಯಲಿದೆ. 

ಮೇ.29 ರಂದು ಬೆಳಗ್ಗೆ 8 ಗಂಟೆಗೆ ಶತ ಚಂಡಿಕಾ ಯಾಗ, ಮದ್ಯಾಹ್ನ 12.15ಕ್ಕೆ ಪೂರ್ಣಾಹುತಿ ನಡೆಯಲಿದೆ.

ಯಾಗದಲ್ಲಿ ಭಾಗವಹಿಸಲು ಯಾವುದೇ ನಿರ್ಬಂಧವಿಲ್ಲ, ಎಲ್ಲರೂ ಭಾಗವಹಸಿಬಹುದು ಮತ್ತು ತನು, ಮನ, ಧನ ಅರ್ಪಣೆ ಮಾಡಬಹುದು ಎಂದು ಹೇಳಿದರು.