ಹಗಲು ಹೊತ್ತು ಸಾರ್ವಜನಿಕರ ಓಡಾಟ ಹೆಚ್ಚಾಗಿದ್ದು, ಯಾವುದೇ ಸಮಸ್ಯೆ ಇಲ್ಲ, ಆದರೇ, ಕತ್ತಲು ಕವಿಯುತ್ತಿದ್ದಂತೆ ಇಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತದೆ. ವಾಕಿಂಗ್ ಪಾಥ್‌ನಲ್ಲಿ ಲೈಟ್ ಇಲ್ಲದ ಕಾರಣ ಕತ್ತಲು ಕವಿದು, ಮಹಿಳೆಯರು ಮಕ್ಕಳು ಮತ್ತು ವೃದ್ಧರ ಸಂಚರಿಸುವಾಗ ಸಾಕಷ್ಟು ತೊಂದರೆ ಅನುಭವ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಈ ವಾಕಿಂಗ್‌ಪಾಥ್ ಬಳಿ ಯಾವುದೇ ಸೆಕ್ಯೂರಿಟಿ ಇಲ್ಲದ ಕಾರಣ ಹಲವು ಕಳವು ಪ್ರಕರಣಗಳು ನಡೆದಿವೆ. ರಾತ್ರಿ ೭ರ ನಂತರ ಆದ ನಂತರ ಈ ಮಾರ್ಗದಲ್ಲಿ ಯಾರೂ ತಿರುಗಾಡಲೂ ಆಗಲ್ಲ, ಸೆಲ್ಯೂಷನ್ ಹೊಡೆಯುವ ಪುಂಡರು, ಗಾಂಜಾ ಗಿರಾಕಿಗಳು ಈ ಮಾರ್ಗವನ್ನು ತಮ್ಮ ಅಡ್ಡ ಮಾಡಿಕೊಳ್ಳುತ್ತಾರೆ. ಒಬ್ಬಂಟಿಯಾಗಿ ಬರುವವರನ್ನು ಟಾರ್ಗೆಟ್ ಮಾಡಿಕೊಂಡು ಬೆಲೆ ಬಾಳುವ ಆಭರಣ, ಪರ್ಸ್, ಹಣ, ಮೊಬೈಲ್ ಕಿತ್ತು ಪರಾರಿಯಾಗುತ್ತಾರೆ. ಹೆಣ್ಣು ಮಕ್ಕಳಂತೂ ಇಲ್ಲಿ ತಿರುಗಾಡಲು ಸಾಧ್ಯವೆ ಇಲ್ಲ ಎನ್ನಲಾಗುತ್ತದೆ. ಬಟ್ಟೆ, ವಾಚ್ ಮಾರುವ ನೆಪದಲ್ಲಿ ಮತ್ತು ಭಿಕ್ಷೆ ಬೇಡೋ ರೀತಿ ಕುಳಿತು ಕೂರುವ ಕೆಲವರು ರಾತ್ರಿ ವೇಳೆ ಈ ಮಾರ್ಗದಲ್ಲಿ ಒಬ್ಬಂಟಿಯಾಗಿ ಬರುವ ಅಮಾಯಕರನ್ನು ಅಟ್ಯಾಕ್ ಮಾಡುತ್ತಾರೆ.
ಈಗಾಗಲೇ ಇಂತಹ ಹಲವು ಪ್ರಕರಣಗಳು ಜರುಗಿವೆ, ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು, ಗಂಭೀರ ಪ್ರಕರಣ ನಡೆದಾಗ ಮಾತ್ರ ಇಲ್ಲಿಗೆ ಪೊಲೀಸರು ಬರುತ್ತಾರೆ. ನಂತರ ಯಾರೂ ಇರಲ್ಲ, ಕೂಡಲೇ ಪೊಲೀಸರು ರಾತ್ರಿ ವೇಳೆ ಇಲ್ಲಿ ಬೀಟ್ ವ್ಯವಸ್ಥೆ ಮಾಡಬೇಕು. ಸಿಸಿ ಕ್ಯಾಮೆರಾ ಅಳವಡಿಕೆ, ರಾತ್ರಿ ವೇಳೆ ಸಾರ್ವಜನಿಕರ ಸಂಚಾರಕ್ಕೆ ಅನಾನುಕೂಲ ಆಗದಂತೆ ಬೆಳಕಿನ ವ್ಯವಸ್ಥೆ ಮಾಡಬೇಕು. ಜತೆಗೆ ಅಮಾಯಕರನ್ನು ವಂಚಿಸಲು ಹೊಂಚು ಹಾಕುವ ಪುಂಡು ಪೋಕರಿಗಳ ಹೆಡೆಮುರಿ ಕಟ್ಟಿ ಬೆಂಡೆತ್ತಿದರೆ ಮಾತ್ರ ಇಲ್ಲಿ ಸಾರ್ವಜನಿಕರು, ಮಹಿಳೆಯರು ನೆಮ್ಮದಿಯಿಂದ ಓಡಾಡಲು ಸಾಧ್ಯ ಎಂದು ಸ್ಥಳೀಯರಾದ ನಂದನ್ ಕುಮಾರ್, ಸತೀಶ್, ಶಿವಣ್ಣ ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಂಜೆಯಾದೊಡನೆ ಈ ಮಾರ್ಗ ಅಕ್ರಮ ಚಟುವಟಿಕೆಗಳ ಅಡ್ಡ ಆಗುತ್ತದೆ. ರಾತ್ರಿ ವೇಳೆ ಒಬ್ಬಂಟಿಗರು ಇಲ್ಲಿ ತಿರುಗಾಡಲು ಅಸಾಧ್ಯ, ಕಳ್ಳರು, ಪುಂಡು ಪೋಕರಿಗಳು ಇಲ್ಲಿ ಹೊಂಚು ಹಾಕುತ್ತಾ ಕುಳಿತಿರುತ್ತಾರೆ. ಅಮಾಯಕರನ್ನು ಸುಲಿಗೆ ಮಾಡಿದ ಹಲವು ಪ್ರಕರಣಗಳು ನಡೆದಿವೆ. ಇಲ್ಲಿಗೆ ತುರ್ತಾಗಿ ಬೆಳಕಿನ ವ್ಯವಸ್ಥೆ, ಸಿಸಿ ಕ್ಯಾಮೆರಾ ಹಾಕಬೇಕು. ಪೊಲೀಸರು ಸಾಧ್ಯವಾದಷ್ಟು ಈ ಮಾರ್ಗದ ಮೇಲೆ ನಿಗಾ ಇಡಬೇಕು.
ಚಿನಕುರಳಿ ಪ್ರದೀಪ್, ಸಮಾಜ ಸೇವಕರು


