ನಗರದ ವಕ್ಫ್ ಸಲಹಾ ಸಮಿತಿ ಆಡಳಿತ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರಂಜಾನ್ ಆಹಾರ ಕಿಟ್ ವಿತರಣೆ ಮಾಡಿದ ನಂತರ ಅಜೀಜುಲ್ಲಾ ಅಜ್ಜು ಅವರು ಮಾತನಾಡಿ, ಮೈಸೂರು ನಗರದ ವಕ್ಫ್ ಬೋರ್ಡ್ ಸುಪರ್ದಿಯಲ್ಲಿರುವ ವಿವಿಧ ಮಸೀದಿಗಳ ಆದಾಯದಲ್ಲಿ ಸಹಾಯ ಪಡೆದು ತಲಾ 2500 ರೂ ಮೌಲ್ಯದ ಅಕ್ಕಿ ಮತ್ತಿತರ ಧಾನ್ಯಗಳ ಸುಮಾರು 310 ಆಹಾರ ಕಿಟ್‌ಗಳನ್ನು ವಿತರಣೆ ಮಾಡಿದ್ದೇವೆ.
ಆದಾಯ ಹೆಚ್ಚಾಗಿರುವ ಕೆಲವು ಮಸೀದಿಗಳ ಆಡಳಿತ ಮಂಡಳಿಯವರು ಸಹಾಯ ಮಾಡಲು ಹಿಂದೇಟು ಹಾಕುವುದು ನಮಗೆ ಬೇಸರ ತಂದಿದೆ.
ಮಸೀದಿಗಳ ಆದಾಯದಲ್ಲಿ ಶೇ.30 ರಷ್ಟು ಹಣವನ್ನು ಬಡವರಿಗೆ, ನಿರ್ಗತಿಕರಿಗೆ, ಆಸ್ಪತ್ರೆಗೆ ಸೇರಿರುವ ರೋಗಿಗಳಿಗೆ, ವಿದ್ಯಾರ್ಥಿಗಳ ಸಹಾಯಕಕ್ಕೆ ನೀಡಬೇಕೆಂದು ಈ ಹಿಂದೆಯೇ ವಕ್ಫ್ ಸಚಿವರಾಗಿದ್ದ ತನ್ವೀರ್ ಸೇಠ್ ಅವರು ವಕ್ಫ್ ನಿಯಮಾವಳಿ ರೂಪಿಸಿದ್ದಾರೆ. ಕೆಲವರನ್ನು ಹೊರತುಪಡಿಸಿ ಉಳಿದ ಬಹುತೇಕ ಮಸೀದಿಗಳ ಆಡಳಿತ ಮಂಡಳಿಯವರು ಈ ನಿರ್ದೇಶನ ಪಾಲಿಸುತ್ತಿಲ್ಲ, ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಸಹಾಯ ಮಾಡಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ವಕ್ಫ್ ಸಲಹಾ ಸಮಿತಿ ಸದಸ್ಯರು, ಅಧಿಕಾರಿಗಳು ಇದ್ದರು.




