ಸುಳ್ಳು ಆರೋಪ ಮಾಡಲಾಗಿದೆ. ನ್ಯಾಯಾಲಯದ ಮೇಲೆ ನನಗೆ ಅಪಾರ ನಂಬಿಕೆ ಇದ್ದು, ಶೀಘ್ರದಲ್ಲೇ ನಾನು ಆರೋಪ ಮುಕ್ತನಾಗುತ್ತೇನೆ ಎಂದು ಮೈಸೂರು ನಗರದ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಎಂ.ರಸೂಲ್ ಹೇಳಿದರು.
ಜಾತಿ ನಿಂದನೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಅವರು, ಟೌನ್ ಹಾಲ್ ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಬಳಿಕ ಮಾತನಾಡಿದರು.
ನಾನು ಪಕ್ಕಾ ಅಂಬೇಡ್ಕರ್ ಅನುಯಾಯಿಯಾಗಿದ್ದೇನೆ. ಸಂವಿಧಾನದ ಆಶಯದಂತೆ ನಾನು ಎನ್‌ಆರ್ ಕ್ಷೇತ್ರದಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ದಿನ ಬೆಳಗಾದರೆ ದಲಿತ ಸಮುದಾಯದ ಜತೆ ನಾನು ಕೆಲಸ ಕಾರ್ಯ ಮಾಡಿಕೊಂಡಿರುತ್ತೇನೆ. ರಾಜಕೀಯ ಕ್ಷೇತ್ರದಲ್ಲಿ ನನ್ನ ಬೆಳವಣಿಗೆಯನ್ನು ಸಹಿಸದ ಕೆಲವು ವ್ಯಕ್ತಿಗಳು ನನ್ನ ವಿರುದ್ಧ ಪಿತೂರಿ ನಡೆಸಿ ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ಈ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲದ ಕಾರಣ ನಾನು ಶೀಘ್ರದಲ್ಲೇ ಆರೋಪ ಮುಕ್ತನಾಗುತ್ತೇನೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
ಕಳೆದ ೨೫ ವರ್ಷಗಳಿಂದ ನಾನು ಸಮಾಜ ಸೇವಾ ಕಾರ್ಯದಲ್ಲಿ ನಿರತನಾಗಿದ್ದು, ಯಾವುದೇ ಕಪ್ಪುಚುಕ್ಕಿ ಇಲ್ಲದಂತೆ ಕೆಲಸ ಮಾಡಿದ್ದೇನೆ. ದಿನೇ ದಿನೇ ನನ್ನ ರಾಜಕೀಯ ಭವಿಷ್ಯ ಉಜ್ವಲವಾಗುತ್ತಿರುವುದನ್ನು ಸಹಿಸದ ಕೆಲವರು ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಸಿ ನನ್ನ ಮೇಲೆ ಜಾತಿನಿಂದನೆ ಆರೋಪ ಹೊರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ರಸೂಲ್ ಅವರ ಗೆಳೆಯರೂ ಸಹ ಮಾತನಾಡಿದರು.

