ಕಾಲೇಜು ಆವರಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ವ್ಯಾಸಂಗಕ್ಕೆ ಬಂದ ವಿದ್ಯಾರ್ಥಿಗಳು ತಮ್ಮ ತಮ್ಮ ಮಾತೃಭಾಷೆಯಲ್ಲಿ ಸಂವಹನ ನಡೆಸಿದ ವೀಡಿಯೋ ಪ್ರದರ್ಶನ ನಡೆಯಿತು.
ನಂತರ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ವೇದಿಕೆ ಸಮಾರಂಭದಕ್ಕೆ ಚಾಲನೆ ನೀಡಿದರು ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಸಾಹಿತ್ಯ ಜಾಗೃತಿ ಕಾರ್ಯಕ್ರಮವೂ ನಡೆಯಿತು.
ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಭಾಷೆಯ ಹಿರಿಯ ಪ್ರಾಧ್ಯಾಪಕರಾದ ವಿಜಯ್ ಶೇಷಾದ್ರಿ ಮಾತನಾಡಿ, ಯಾವುದೇ ಭಾಷೆಗಳನ್ನು ಕಲಿಯುವುದು ಒಂದು ಕಲೆ, ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ನಮ್ಮ ಜ್ಞಾನ ಅರಳುತ್ತದೆ. ಸಾಂಸ್ಕೃತಿಕವಾಗಿ ನಾವು ಹೆಚ್ಚು ಜ್ಞಾನವಂತರಾಗುತ್ತೇವೆ. ಯಾವುದೇ ಭಾಷೆಗಳನ್ನು ವ್ಯಾಕರಣ ಬದ್ಧವಾಗಿ ಕಲಿಯುವುದು ಉತ್ತಮ, ಭಾಷೆಗಳಲ್ಲಿ ಮೇಲು, ಕೀಳು ಎಂಬುದಿಲ್ಲ, ಪ್ರಪಂಚದ ಯಾವುದೇ ಭಾಷೆಯನ್ನು ಕಲಿತರೂ ನಮ್ಮ ಜ್ಞಾನವನ್ನು ವೃದ್ಧಿಸಿಕೊಂಡಂತೆ ಎಂದು ಹೇಳಿದರು.
ಇದೇ ವೇಳೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ರೆಕ್ಟರ್ ಡಾ.ಲೂರ್ದು ಪ್ರಸಾದ್ ಜೋಸೆಫ್ ಅವರು ಮಾತನಾಡಿ, ೮೦ ವರ್ಷಗಳ ಸುದೀರ್ಘ ಇತಿಹಾಸವಿರುವ ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಸಾಹಿತ್ಯ ಅರಿವು ಕಾರ್ಯಕ್ರಮದೊಂದಿಗೆ ಆಯೋಜಿಸಲಾಗಿದೆ. ನಮ್ಮ ಕಾಲೇಜಿನಲ್ಲಿ ಫ್ರೆಂಚ್, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಉರ್ದು, ಅರೆಬಿಕ್ ಸೇರಿದಂತೆ ವಿವಿಧ ಭಾಷೆಗಳನ್ನು ಕಲಿಸಲಾಗುತ್ತದೆ.
ಇದಕ್ಕೆ ಅಗತ್ಯವಾದ ಅಧ್ಯಾಪಕ ವರ್ಗವೂ ನಮ್ಮ ಕಾಲೇಜಿನಲ್ಲಿದೆ. ಮಾತೃಭಾಷೆಯ ಮೂಲಕ ನಮ್ಮ ಹೃದಯಾಂತರಾಳದ ಸಂವೇದನೆಗಳನ್ನು ಹಂಚಿಕೊಳ್ಳಬಹುದು ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ. ನಮ್ಮ ಕಾಲೇಜಿನಲ್ಲಿ ೫ ಸಾವಿರ ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಎಲ್ಲ ಭಾಷೆಗಳನ್ನು ಕಲಿತು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವಂತೆ ನಾವು ನಮ್ಮ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗೌರವ ಅತಿಥಿ ಮೈಸೂರು ಪುಸ್ತಕ ಕ್ಲಬ್ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷೆ ಶುಬಾ ಸಂಜಯ್ ಅರಸ್ ಅವರು ಮಾತನಾಡಿದರು. ನಂತರ ಅತಿಥಿಗಳನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.
ಪ್ರಾಂಶುಪಾಲರಾದ ರವಿ ಜೆಡಿ ಸಲ್ಡಾನ, ಡಾ.ಸದೇಬೋಸ್, ಐಕ್ಯೂಎಸಿ ಸಂಯೋಜಕರಾದ ಎ.ಥಾಮಸ್ ಗುಣಸೀಲನ್ ಇತರರು ಇದ್ದರು.

