ಊರು ಬೆಳಕು ಕಾಣಲು ಸದುದ್ದೇಶದ ಶಾಲೆಗಳು ಮತ್ತು ದೇವಾಲಯಗಳು ಅಗತ್ಯ : ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿಮತ

ಕಪರನಕೊಪ್ಪಲು (ದರಸಗುಪ್ಪೆ) ಮಾನಸ ಶಿಕ್ಷಣ ಸಂಸ್ಥೆಯಲ್ಲಿ ವಿಜೃಂಭಣೆಯ ಶಾಲಾ ವಾರ್ಷಿಕೋತ್ಸವ

ಶ್ರೀರಂಗಪಟ್ಟಣ : ಒಂದು ಊರು ಬೆಳಕು ಕಾಣಬೇಕಾದರೆ ಅಲ್ಲಿ ಶಾಲೆಗಳು ಮತ್ತು ಒಳ್ಳೆಯ ಉದ್ದೇಶಕ್ಕಾಗಿ ಕಟ್ಟಿದ ದೇವಾಲಯಗಳು ಇರುವುದು ಮುಖ್ಯ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ತಾಲ್ಲೂಕಿನ ಕಪರನಕೊಪ್ಪಲು, ದರಸಗುಪ್ಪೆ ಗ್ರಾಮದಲ್ಲಿರುವ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ೨೫ ವರ್ಷಗಳ ಹಿಂದೆ ಯಾವುದೇ ಲಾಭದ ಉದ್ದೇಶ ಇಟ್ಟುಕೊಳ್ಳದೆ ಕೇವಲ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಪಿಎಸ್‌ಎಸ್‌ಕೆ ಮಾಜಿ ಅಧ್ಯಕ್ಷರಾದ ಚಿಕ್ಕ ರಾಮಂಜೇಗೌಡರು ಪ್ರಾರಂಭಿಸಿದ ಮಾನಸ ಶಿಕ್ಷಣ ಸಂಸ್ಥೆಯು ಇಂದು ಬೃಹದಾಕಾರವಾಗಿ ಬೆಳೆದಿದೆ. ಇದರ ಸದುದ್ದೇಶ ಸ್ಪಷ್ಟವಾಗಿದೆ. ಹೀಗಾಗಿ ಈ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಸಹಾಯ ಮಾಡುವುದಾಗಿ ರವೀಂದ್ರ ಶ್ರೀಕಂಠಯ್ಯ ಭರವಸೆ ನೀಡಿದರು.

ಭಾರತ ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಇರುವ ದೇಶವಾಗಿದೆ. ಮಾನವ ಸಂಪನ್ಮೂಲ ಇಲ್ಲಿ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ಶಿಕ್ಷಣವೊಂದೇ ಇಂದಿನ ಯುವ ಜನತೆಯನ್ನು ಕೈ ಹಿಡಿಯಬಲ್ಲದು. ಜಗತ್ತಿನೆಲ್ಲೆಡೆ ಭಾರತೀಯರು ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ರೈತರು ಸಹ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಉದ್ಯೋಗಕ್ಕೆ ಕಳಿಸುವ ಮೂಲಕ ಉತ್ತಮ ಜೀವನ ನಡೆಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ಹೇಳಿದರು.\

ಸಮಾರಂಭದಲ್ಲಿ ನಿಯೋಜಿತ ಪದ್ಮಶ್ರೀ ಪ್ರಶಸ್ತಿ ವಿಜೇತ ಪುಸ್ತಕದ ಮನೆಯ ಅಂಕೇಗೌಡರು, ಲೇಖಕರು ಮತ್ತು ನಿವೃತ್ತ ಪ್ರಾಂಶುಪಾಲರಾದ ಬಿ.ಎನ್.ನಾರಾಯಣಗೌಡರು ಮಾತನಾಡಿದರು.

ಇದೇ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಗಣ್ಯರನ್ನು ಶಾಲಾ ಸಮಿತಿಯಿಂದ ಸನ್ಮಾನಿಸಲಾಯಿತು. ಜತೆಗೆ ಶಾಲಾ ಶಿಕ್ಷಕರು ಸಂಸ್ಥೆಯ ಅಧ್ಯಕ್ಷರಾದ ಚಿಕ್ಕ ರಾಮಂಜೇಗೌಡ ಮತ್ತು ರಾಜಲಕ್ಷ್ಮಿ ಅವರನ್ನು ಆತ್ಮೀಯವಾಗಿ ಗೌರವಿಸಿದರು.

ನಂತರ ಮಕ್ಕಳ ಮನರಂಜನಾ ಕಾರ್ಯಕ್ರಮ ನಡೆಯಿತು. ಪುಟಾಣಿ ಮಕ್ಕಳು ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದರೆ, ಪೋಷಕರು ತಮ್ಮ ಮಕ್ಕಳ ನರ್ತನವನ್ನು ಕಂಡು ಪುಳಕಿತರಾದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಡ್ಯಾನ್ಸ್ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ಸಾವಿರಾಗಿ ಸಂಖ್ಯೆಯಲ್ಲಿ ಪೋಷಕರು ಹಾಜರಿದ್ದು ತಮ್ಮ ಮಕ್ಕಳ ಅಭಿನಯವನ್ನು ಕಣ್ತುಂಬಿಕೊಂಡರು.

ಕಾರ್ಯಕ್ರಮದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಚಿಕ್ಕ ರಾಮಂಜೇಗೌಡ, ಪುಸ್ತಕದ ಮನೆ ಅಂಕೇಗೌಡ, ನಿವೃತ್ತ ಪ್ರಾಂಶುಪಾಲರಾದ ಬಿ.ನಾರಾಯಣಗೌಡ, ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಜಿ.ಧನಂಜಯ್ಯ, ಮಾನಸ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಟಿ.ರಂಗೇಗೌಡ, ಗೌರವ ಕಾರ್ಯದರ್ಶಿ ಎಂ.ಕುಮಾರ್, ದಿಶಾ ಸಮಿತಿ ಸದಸ್ಯೆ ರಾಜಲಕ್ಷ್ಮಿ ಚಿಕ್ಕರಾಮಂಜೇಗೌಡ, ಪಿಎಸ್‌ಎಸ್‌ಕೆ ಮಾಜಿ ಅಧ್ಯಕ್ಷ ಕೆ.ರಾಮಚಂದ್ರು, ಡೇರಿ ಅಧ್ಯಕ್ಷರಾದ ರಾಜೇಶ್ ಕೆ., ಸಿಆರ್‌ಪಿ ಸಿ.ನಂದೀಶ್, ಎಸ್.ಗೋವಿಂದಪ್ಪ, ನಾಗರತ್ನಮ್ಮ, ಜಗದೀಶ್, ಸುವರ್ಣ, ಎಸ್‌ಡಿಎಂಸಿ ಅಧ್ಯಕ್ಷರಾದ ವಿಶಾಲಾಕ್ಷಿ, ಸಹ ಕಾರ್ಯದರ್ಶಿ ಕೆ.ಲಕ್ಷ್ಮಿನಾರಾಯಣ, ಬಿ.ಪುಟ್ಟಸ್ವಾಮಿಗೌಡ, ಕೆ.ಯೋಗೇಶ್, ಸಿ.ಕುಮಾರ್, ಬಿ.ಕೆ.ರಮೇಶ್, ಆರ್.ಲಕ್ಷ್ಮಿನಾರಾಯಣ, ಕೆಂಪಯ್ಯ, ತಮ್ಮೇಗೌಡ, ಎಂ.ಗೋಪಾಲ್, ಶ್ವೇತಾ, ಪೈ.ನಾರಾಯಣ, ಶಾಲಾ ಮುಖ್ಯೋಪಾಧ್ಯಾಯರಾದ ನಾರಾಯಣಗೌಡ ಮತ್ತಿತರರು ಇದ್ದರು. 

ನಮ್ಮ ಜಿಲ್ಲೆಯ ಹೆಮ್ಮೆಯ ಮಗ ಪುಸ್ತಕದ ಮನೆ ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಆಗಿರುವುದು ಮಂಡ್ಯ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ತಮ್ಮ ಬದುಕಿನುದ್ದಕ್ಕೂ ತಮ್ಮ ಸಂಪಾದನೆಯ ಹಣವನ್ನು ಪುಸ್ತಕ ಸಂಗ್ರಹಕ್ಕೆ ವಿನಿಯೋಗಿಸುವ ಮೂಲಕ ನಮ್ಮ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿರುವ ಅಂಕೇಗೌಡರು ಮಂಡ್ಯ ಜಿಲ್ಲೆಯ ಹೆಮ್ಮೆ.

ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕ