ಮೈಸೂರು : ಮೈಸೂರು ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಜೀರ್ಣಾಂಗ ಮತ್ತು ಲಿವರ್ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ. ಬದಲಾದ ಜೀವನಶೈಲಿ, ದೈಹಿಕ ಶ್ರಮವಿಲ್ಲದ ದಿನಚರಿ, ಹೆಚ್ಚುತ್ತಿರುವ ಮಾನಸಿಕ ಒತ್ತಡ ಮತ್ತು ರೋಗಲಕ್ಷಣಗಳ ಬಗ್ಗೆ ಅರಿವಿನ ಕೊರತೆಯಿಂದಾಗಿ ರೋಗನಿರ್ಣಯ ವಿಳಂಬವಾಗುತ್ತಿದೆ. ಹೀಗಾಗಿ, ರೋಗಿಗಳಿಗೆ ಒಂದೇ ಕಡೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲು ಮೈಸೂರಿನ ಮಣಿಪಾಲ್ ಆಸ್ಪತ್ರೆಯು ‘ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್' ಪ್ರಾರಂಭಿಸಿದೆ.
ಮೈಸೂರು ಪ್ರೆಸ್ ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೀನಿಯರ್ ಕನ್ಸಲ್ಟೆಂಟ್-ಮೆಡಿಕಲ್ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ. ತಜ್ಞರಾದ ಡಾ.ಸತೀಶ್ ರಾವ್ ಎ.ಕೆ., ಅವರು ಮಾತನಾಡಿ,
ಈ ನೂತನ ವಿಭಾಗವು ಗ್ಯಾಸ್ಟ್ರೋ ಎಂಟರಾಲಜಿ, ಹೆಪಟಾಲಜಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಆಧುನಿಕ ಇಂಟರ್ವೆನ್ಷನಲ್ ಎಂಡೋಸ್ಕೋಪಿಯನ್ನು ಒಂದೆಡೆ ಲಭ್ಯವಾಗುವಂತೆ ಮಾಡಲಿದೆ. ರೋಗಿಗಳಿಗೆ ಆರಂಭಿಕ ಹಂತದಲ್ಲಿಯೇ ನಿಖರ ರೋಗಪತ್ತೆ, ಸುಧಾರಿತ ಪರೀಕ್ಷಾ ವಿಧಾನಗಳು ಮತ್ತು ಸಮಗ್ರ ಚಿಕಿತ್ಸೆಗಳನ್ನು ಒದಗಿಸುವುದು ಇದರ ಉದ್ದೇಶ.
ಇದು ಮೈಸೂರನ್ನು ಆಧುನಿಕ ಜೀರ್ಣಾಂಗ ಮತ್ತು ಲಿವರ್ ಆರೈಕೆಯ ಪ್ರಾದೇಶಿಕ ಕೇಂದ್ರವನ್ನಾಗಿ ಬಲಪಡಿಸಲಿದೆ.
ಅನುಭವಿ ವೈದ್ಯರಾದ ಸೀನಿಯರ್ ಕನ್ಸಲ್ಟೆಂಟ್-ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಚ್.ಪಿ.ಬಿ ಸರ್ಜನ್ ಡಾ. ವಾಸುದೇವ್ ಪೈ ಹೊಸದುರ್ಗ ಮತ್ತು ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಕನ್ಸಲ್ಟೆಂಟ್ ಡಾ.ನಿಶ್ಚಯ್ ಆರ್., ಅವರು ಸಹ ಈ ಚಿಕಿತ್ಸಾ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಈ ತಜ್ಞರ ತಂಡವು ದೊಡ್ಡ ಕರುಳಿನ ತಪಾಸಣೆ (ಕೊಲೊನೋಸ್ಕೋಪಿ), ಜಠರ ಮತ್ತು ಅನ್ನನಾಳದ ತಪಾಸಣೆ (ಅಪ್ಪರ್ ಜಿಐ ಎಂಡೋಸ್ಕೋಪಿ), ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಮತ್ತು ಇಆರ್‍ಸಿಪಿ ಯಂತಹ ಸುಧಾರಿತ ಸೇವೆಗಳನ್ನು ನೀಡಲಿದೆ ಎಂದರು.
ಆರಂಭಿಕ ಪತ್ತೆಯ ಮಹತ್ವದ ಬಗ್ಗೆ ಮಾತನಾಡಿದ ಡಾ. ಸತೀಶ್ ರಾವ್ ಎ.ಕೆ, "ಜೀರ್ಣಾಂಗ ಮತ್ತು ಲಿವರ್ ಕಾಯಿಲೆಗಳು ಮುಂದುವರಿದ ಹಂತಕ್ಕೆ ತಲುಪುವವರೆಗೂ ಸದ್ದಿಲ್ಲದೆ ಬೆಳೆಯುತ್ತವೆ. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್ ಮೂಲಕ, ಮೈಸೂರಿನಲ್ಲಿಯೇ ಲಭ್ಯವಿರುವ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಆರಂಭಿಕ ರೋಗನಿರ್ಣಯಕ್ಕೆ ಒತ್ತು ನೀಡುವುದು ನಮ್ಮ ಗುರಿ." ಎಂದು ಹೇಳಿದರು.
ಸಮಗ್ರ ಆರೈಕೆಯ ಅಗತ್ಯವನ್ನು ಒತ್ತಿ ಹೇಳಿದ ಡಾ. ವಾಸುದೇವ್ ಪೈ ಹೊಸದುರ್ಗ ಅವರು, "ಸಮಗ್ರ ಗ್ಯಾಸ್ಟ್ರೋ-ಇಂಟೆಸ್ಟಿನಲ್ ಮತ್ತು ಹೆಪಟೊಬಿಲಿಯರಿ ಶಸ್ತ್ರಚಿಕಿತ್ಸೆಗಳ ನಿರ್ವಹಣೆಯಲ್ಲಿನ ನನ್ನ ಹಲವು ವರ್ಷಗಳ ವೃತ್ತಿಜೀವನದ ಅನುಭವದ ಆಧಾರದ ಮೇಲೆ ಹೇಳುವುದಾದರೆ, ಕಾಯಿಲೆಯನ್ನು ಸರಿಯಾದ ಸಮಯದಲ್ಲಿ ಗುರುತಿಸದಿದ್ದರೆ, ಅದು ತೀವ್ರಗೊಂಡು ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಎದುರಾಗುತ್ತದೆ. ಆರಂಭಿಕ ಹಂತದಲ್ಲೇ ಲಕ್ಷಣಗಳನ್ನು ಗುರುತಿಸಿ ಸಕಾಲದಲ್ಲಿ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡರೆ, ಇಂತಹ ಶಸ್ತ್ರಚಿಕಿತ್ಸೆಗಳ ಅಗತ್ಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ನಮ್ಮ ಸಂಸ್ಥೆಯ ಎಲ್ಲವನ್ನೂ ಒಳಗೊಂಡ ಚಿಕಿತ್ಸಾ ವಿಧಾನದ ಮೂಲಕ ರೋಗಗಳನ್ನು ಮೊದಲೇ ಪತ್ತೆಹಚ್ಚಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ, ಕಾಯಿಲೆಯು ತೀವ್ರ ಸ್ವರೂಪ ಪಡೆಯದಂತೆ ತಡೆಯುವುದು ನಮ್ಮ ಗುರಿಯಾಗಿದೆ." ಎಂದು ಹೇಳಿದರು.
ಇಂದಿನ ಬದಲಾದ ಜೀವನಶೈಲಿಯಿಂದ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಡಾ. ನಿಶ್ಚಯ್ ಆರ್ ಅವರು, ``ಆಧುನಿಕ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿವೆ. ಈ ಸಮಯದಲ್ಲಿ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ನಮ್ಮ ಸಂಸ್ಥೆಯು ರೋಗಿಗಳಿಗೆ ಅಗತ್ಯವಿರುವ ಸುಧಾರಿತ ಎಂಡೋಸ್ಕೋಪಿ, ಹೆಪಟಾಲಜಿ (ಯಕೃತ್ತಿನ ಚಿಕಿತ್ಸೆ) ಮತ್ತು ಗ್ಯಾಸ್ಟ್ರೋ-ಎಂಟರಾಲಜಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಇದರಿಂದ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಮಗ್ರ ಚಿಕಿತ್ಸೆ ಸಿಗುವುದು ಖಚಿತವಾಗುತ್ತದೆ.'' ಎಂದು ತಿಳಿಸಿದರು.
ಈ ಹೊಸ ವ್ಯವಸ್ಥೆಯು ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಮತ್ತು ನೆರೆಯ ಜಿಲ್ಲೆಗಳ ರೋಗಿಗಳಿಗೆ ವರದಾನವಾಗಲಿದೆ. ಹಿಂದೆ ಸುಧಾರಿತ ಚಿಕಿತ್ಸೆಗಾಗಿ ಮೆಟ್ರೋ ನಗರಗಳಿಗೆ ಹೋಗಬೇಕಿದ್ದ ಅನಿವಾರ್ಯತೆ ಇನ್ನು ತಪ್ಪಲಿದೆ. ಸ್ಥಳೀಯವಾಗಿಯೇ ಚಿಕಿತ್ಸೆ ಲಭ್ಯವಿರುವುದರಿಂದ ರೋಗಿಗಳಿಗೆ ಆರ್ಥಿಕ ಹೊರೆ ಮತ್ತು ಪ್ರಯಾಣದ ತೊಂದರೆ ಕಡಿಮೆಯಾಗಲಿದೆ. ಜೀರ್ಣಾಂಗ ಸಂಬಂಧಿ ಸಮಸ್ಯೆಗಳು ಕಂಡುಬಂದಲ್ಲಿ ಅಥವಾ ಲಿವರ್ ಕಾಯಿಲೆಯ ಅಪಾಯವಿದ್ದರೆ ತಕ್ಷಣವೇ ತಜ್ಞರನ್ನು ಸಂಪರ್ಕಿಸಿ ಆರಂಭಿಕ ತಪಾಸಣೆ ಮಾಡಿಸಿಕೊಳ್ಳುವಂತೆ ತಜ್ಞ ವೈದ್ಯರು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: +91 97411 83180
