ಶ್ರದ್ಧಾ ಭಕ್ತಿಯಿಂದ ಜರುಗಿದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣದ ಭೂಮಿಪೂಜೆ

 

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಇಲ್ಲಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ಗುರುವಾರ ಬೆಳಗ್ಗೆ ಚಾಲನೆ ದೊರೆಯಿತು.

ದೇವಾಲಯದ ಸಂಸ್ಥಾಪಕರಾದ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ ಅವರು, ರಾಜಗೋಪುರ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಗುರುವಾರ ಬೆಳಗ್ಗಿನಿಂದಲೇ ಶ್ರೀ ಯೋಗಾನರಸಿಂಹಸ್ವಾಮಿಗೆ ವಿಶೇಷ ಪೂಜಾ-ಕೈಂಕರ್ಯಗಳು ಜರುಗಿದವು. ೧೦.೩೦ರಿಂದ ೧೧.೦೦ ಗಂಟೆಯ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ವಿಧಿ-ವಿಧಾನಗಳಂತೆ ರಾಜಗೋಪುರ ನಿರ್ಮಾಣ ಕಾರ್ಯಕ್ಕೆ ಶ್ರೀಗಳು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾಷ್ಯಂ ಸ್ವಾಮೀಜಿ ಅವರು, ಯೋಗಾನರಸಿಂಹ ದೇವಾಲಯವನ್ನು ಮತ್ತಷ್ಟು ಅಭಿವೃದ್ದಿಗೊಳಿಸಿ, ಭಕ್ತರಿಗೆ ಅಗತ್ಯ ಸಕಲ-ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದ್ದು, ಅಂತೆಯೇ ಇಂದು ದೇಗುಲದ ರಾಜಗೋಪುರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಬೇಕೆಂದು ಆಶೀರ್ವದಿಸಿದರು.

ಇದೇ ವೇಳೆ ದೇವಸ್ಥಾನಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್, ಪ್ರಧಾನ ಅರ್ಚಕರಾದ ಶೇಷಾದ್ರಿ ಅವರುಗಳು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.