ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ವಿಳಂಬ ಧೋರಣೆ ಮೂಲಕ ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಆರೋಪ : ಇಂದು ಮೈಸೂರು ತಾಲ್ಲೂಕು ಕಚೇರಿ ಎದುರು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ


 ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುವ ಮೂಲಕ ಮೈಸೂರು ತಾಲ್ಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಘಟಕ, ರೈತಸಂಘಟನೆ ಮತ್ತು ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ಮೈಸೂರು ತಾಲ್ಲೂಕು ಕಚೇರಿ ಫೆ.೫ ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಅಧ್ಯಕ್ಷರಾದ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಮೈಸೂರು ತಾಲೂಕು ಕಚೇರಿಯಲ್ಲಿ ಲಂಚ ಇಲ್ಲದೆ ಯಾವುದೇ ಕೆಲಸಗಳು ಸುಲಲಿತವಾಗಿ ಆಗುವುದಿಲ್ಲ, ಮಧ್ಯವರ್ತಿಗಳ ಮೂಲಕ ಇಂತಹ ಕೆಲಸಕ್ಕೆ ಇಂತಿಷ್ಟು ಹಣ ಎಂದು ಕೊಟ್ಟ ಮೇಲೆ ಮಾತ್ರ ಇಲ್ಲಿ ಕೆಲಸಗಳು ಆಗುತ್ತವೆ. ಲಂಚ ಕೊಡಲು ಆಗದ ಸಾರ್ವಜನಿಕರ ಅರ್ಜಿಗಳು ವರ್ಷಗಟ್ಟಲೆ ಕಚೇರಿಯಲ್ಲಿ ಕೊಳೆಯುತ್ತವೆ, ಇದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅನೇಕ ಕಾರಣಗಳನ್ನು ಹೇಳಿ ಸಾರ್ವಜನಿಕರನ್ನು ಸಾಗ ಹಾಕುತ್ತಾರೆ. ಹಣ ಕೊಟ್ಟರೆ ಕ್ಷಣಾರ್ಧದಲ್ಲಿ ನಮ್ಮ ಕೆಲಸಗಳು ಆಗುತ್ತವೆ. ಇದರ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಸಾರ್ವಜನಿಕರ ಕಡತಗಳನ್ನು ಉದ್ದೇಶಪೂರ್ವಕವಾಗಿ ಇಲಾಖೆಯಲ್ಲಿಟ್ಟುಕೊಂಡು ವಿಳಂಬ ನೀತಿ ಅನುಸರಿಸುತ್ತಾರೆ. ಕಂದಾಯ ಇಲಾಖೆಯ ಸುತ್ತೋಲೆಯನ್ನು ಅರ್ಥೈಸಿಕೊಳ್ಳದೆ ಪೌತಿ ಖಾತೆ ಹಾಗೂ ದುರಸ್ತಿಪೋಡ್ ಮಾಡುತ್ತಿಲ್ಲ, ಸರ್ಕಾರದ ಸುತ್ತೋಲೆಗಳು, ಕಾನೂನು ಕಟ್ಟಳೆಗಳು ಇಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ. ಮೈಸೂರು ತಾಲ್ಲೂಕು  ಆಡಳಿತದಿಂದ ನಾಗರಿಕರಿಗೆ ಹಾಗೂ ರೈತರಿಗೆ ದಿನನಿತ್ಯ ಕಿರುಕುಳವಾಗುತ್ತಿದ್ದು ಕಚೇರಿಯಲ್ಲಿ ಬೇಜವಾಬ್ದಾರಿ ಉತ್ತರಗಳನ್ನು ನೀಡುವುದಲ್ಲದೆ ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಉನ್ನತ ಅಧಿಕಾರಿಗಳು, ಸಚಿವರು ಕೂಡಲೇ ಇತ್ತ ಗಮನಹರಿಸಬೇಕು ಎಂದರು.