ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಸಾರ್ವಜನಿಕರು ಮತ್ತು ಸಂಘಮಿತ್ರ ಸಂಸ್ಥೆಯ ಸಹಯೋಗದೊಂದಿಗೆ ಮೈಸೂರಿನ ಓಡಿಪಿ ಸಂಸ್ಥೆಯಿಂದ 80 ಜನ ಕ್ಯಾನ್ಸರ್ ಪೀಡಿತ ರೋಗಿಗಳಿಗೆ 7.17 ಲಕ್ಷ ರೂ. ಸಹಾಯ ಧನವನ್ನು ಸಂಸ್ಥೆಯ ನಿರ್ದೇಶಕರಾದ ಫಾದರ್ ಟೆನ್ನಿ ಕುರಿಯನ್ ವಿತರಣೆ ಮಾಡಿದರು.
ಓಡಿಪಿ ಸಂಸ್ಥೆ ಆವರಣದಲ್ಲಿ ಬುಧವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಮಡಿಕೇರಿ ಜಿಲ್ಲೆಗಳಿಂದ ಆಯ್ಕೆ ಮಾಡಿದ 80 ಜನ ವಿವಿಧ ಹಂತಗಳ ಬಡ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾರಾಯಣ ಆಸ್ಪತ್ರೆಯ ಕ್ಯಾನ್ಸರ್ ರೋಗ ಚಿಕಿತ್ಸಕರಾದ ಡಾ.ಪಿ.ಪ್ರದೀಪ್ ಮಾತನಾಡಿ, ಕ್ಯಾನ್ಸರ್ ರೋಗ ಬಂದವರು ಭಯ ಪಡಬಾರದು ಮತ್ತು ನಿರ್ಲಕ್ಷ್ಯ ಕೂಡ ಮಾಡಬಾರದು, ಪ್ರಪಂಚದಲ್ಲಿ ಪ್ರತಿ ವರ್ಷ 3 ಕೋಟಿ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ವೇಗ ನೋಡಿದರೆ ಮುಂದೊಂದು ದಿನ ಕ್ಯಾನ್ಸರ್ ಎನ್ನುವುದು ಸಾಮಾನ್ಯ ಕಾಯಿಲೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, ಇಂದಿನ ಆಧುನಿಕ ಚಿಕಿತ್ಸಾ ಪದ್ದತಿಯಲ್ಲಿ ಕ್ಯಾನ್ಸರ್ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಗುಣಪಡಿಸಲು ಸಾಧ್ಯ ಇದಕ್ಕಾಗಿ ನಿಯಮಿತವಾಗಿ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಯಾನ್ಸರ್ ರೋಗಕ್ಕೆ ಅಲೋಪತಿ ಚಿಕಿತ್ಸೆಯೇ ಉತ್ತಮ ಎಂದು ಪ್ರತಿಪಾದಿಸಿದ ಅವರು, ಇತರೆ ಚಿಕಿತ್ಸಾ ಪದ್ದತಿಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ, ಹೀಗಾಗಿ ಇಂತಹ ಚಿಕಿತ್ಸೆಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.
ವಿಶ್ವ ಕ್ಯಾನ್ಸರ್ ದಿನದಂದು ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ, ತಡೆಗಟ್ಟುವಿಕೆಯ ಕ್ರಮಗಳನ್ನು ತಿಳಿಸುವ ಮತ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳುವ ಅಂತರರಾಷ್ಟ್ರೀಯ ದಿನವಾಗಿದೆ. ಓಡಿಪಿ ಸಂಸ್ಥೆಯು ಈ ದಿನವನ್ನು ಕ್ಯಾನ್ಸರ್ ಪೀಡಿತರಿಗೆ ಧನ ಸಹಾಯ ಮಾಡುವ ಮೂಲಕ ಸಾರ್ಥಕ ದಿನವನ್ನಾಗಿ ಆಚರಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳು ರೋಗಿಗಳಲ್ಲಿ ಸಮುದಾಯ ನಮ್ಮೊಂದಿಗೆ ಇದೆ ಎಂಬ ಆತ್ಮ ವಿಶ್ವಾಸ ಮೂಡಿಸುತ್ತದೆ. ಜತೆಗೆ ಕ್ಯಾನ್ಸರ್‍ನಿಂದಾಗಿ ಉಂಟಾಗುವ ರೋಗ ಮತ್ತು ಮರಣಗಳನ್ನು ಕಡಿಮೆ ಮಾಡುವುದು ಸಹ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದರು.
ಓಡಿಪಿ ಸಂಸ್ಥೆ ನಿರ್ದೇಶಕರಾದ ಫಾದರ್ ಟೆನ್ನಿ ಕುರಿಯನ್ ಮಾತನಾಡಿ, ವಿವಿಧ ದಾನಿಗಳು ಮತ್ತು ಸಂಘಮಿತ್ರ ಸಂಸ್ಥೆಯ ಸಹಯೋಗದೊಂದಿಗೆ 80 ಜನ ಕ್ಯಾನ್ಸರ್ ರೋಗಪೀಡಿತರಿಗೆ 7.17 ಲಕ್ಷ ರೂ ಸಹಾಯ ಧನವನ್ನು ವಿತರಿಸಲಾಗಿದೆ, ಈ ಮೂಲಕ ಸಂಘಮಿತ್ರ ಸಂಸ್ಥೆ ಮತ್ತು ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಮುಂದೆಯೂ ದಾನಿಗಳಿಂದ ಇದೇ ರೀತಿ ಸಹಾಯವನ್ನು ನಿರೀಕ್ಷಿಸುತ್ತೇವೆ. ರೋಗಿಗಳು ಯಾವುದೇ ರೀತಿಯ ಭಯ ಪಡುವುದು ಬೇಡ, ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಸಮುದಾಯ ನಿಮ್ಮೊಂದಿಗಿದೆ ಎಂದು ಭರವಸೆಯ ಮಾತುಗಳನ್ನಾಡಿದರು.
ಇದೇ ವೇಳೆ ವೇದಿಕೆಯಲ್ಲಿದ್ದ ಗಣ್ಯರು ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುರುಗೇಶ್ ಮಹದೇವ, ಯಮುನಾ ಮುಂತಾದವರು ಮಾತನಾಡಿದರು.
ಓಡಿಪಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಫಾದರ್ ಜಾನ್ ಫನಾಂಡೀಸ್ ಎ., ಸಂಘಮಿತ್ರ ಮೈಸೂರು ವಿಭಾಗದ ರಿಜನಲ್ ಮ್ಯಾನೇಜರ್ ಮಹದೇವಸ್ವಾಮಿ, ದಾನಿಗಳಾದ ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸ್ಟ್ಯಾನಿ ಲೋಬೋ, ಸಂಯೋಜಕರಾದ ರತ್ನ ಇತರರು ಇದ್ದರು.
*****
"ಒಗ್ಗಟ್ಟಿನಲ್ಲಿ ಏಕತೆ, ಅಗತ್ಯಗಳಲ್ಲಿ ವಿಶಿಷ್ಟತೆ" ಈ ಸಾಲಿನ ವಿಶ್ವ ಕ್ಯಾನ್ಸರ್ ದಿನಾಚರಣೆಯ ಥೀಮ್ ಆಗಿದೆ. ಜಾಗತಿಕ ಸಮುದಾಯವನ್ನು ಒಗ್ಗೂಡಿಸಿ, ತಡೆಯಬಹುದಾದ ಕ್ಯಾನ್ಸರ್‍ಗಳ ವಿರುದ್ಧ ಹೋರಾಡುವುದು ನಮ್ಮ ಕರ್ತವ್ಯ. ತಂಬಾಕು ಸೇವನೆ, ಮದ್ಯಪಾನ, ಪಾನ್ ಗುಟ್ಕಾ ಮುಂತಾದವುಗಳನ್ನು ನಿಷೇಧಿಸಿದರೆ ಶೇ.30 ರಷ್ಟು ಕ್ಯಾನ್ಸರ್ ತಡೆಗಟ್ಟಬಹುದು.
• ಡಾ.ಪ್ರದೀಪ್ ಪಿ., ಕ್ಯಾನ್ಸರ್ ತಜ್ಞರು, ನಾರಾಯಣ ಆಸ್ಪತ್ರೆ



