ಮೈಸೂರು: ಸಮಾಜದಲ್ಲಿ ನಿತ್ಯ ಬಡ್ಡಿಯಿಂದಾಗಿ ಜನರು ಅನೇಕ ರೀತಿಯ ಶೋಷಣೆ ಒಳಗಾಗುತ್ತಿರುವ ಈ ಸಂದರ್ಭದಲ್ಲಿ ಈ ಕುಟುಂಬ ಆಧಾರಿತ ಬ್ಯಾಂಕ್ ಜನಪರವಾಗಿದ್ದು, ಯಶಸ್ವಿಯಾಗಿ ಮುಂದುವರೆಯಲಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿರುವ ಫ್ಯಾಮಿಲಿ ಡೆವಲಪ್ ಮೆಂಟ್ ಕೋ ಅಪರೇಟಿವ್ ಥ್ರೀಫ್ಟ್ ಮತ್ತು ಕ್ರೆಡಿಟ್ ಸೊಸೈಟಿ ಲಿಮಿಟೆಡ್ (ಫ್ಯಾಮ್ಕೋ) ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುಟುಂಬದ ಒಳಿತಾಗಿ ಸಹಕಾರಿ ತತ್ವದಡಿಯಲ್ಲಿ ಮಾಡುತ್ತಿರುವ ಬ್ಯಾಂಕ್ ಇದಾಗಿದೆ. ಬ್ಯಾಂಕ್‍ಗಳಿಂದ ಸಾಲ ಸೌಲಭ್ಯವನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಬಹುಮುಖ್ಯ ಉದ್ದೇಶವಾಗಿದೆ. ಕುಟುಂಬಕ್ಕೆ ಬೇಕಾದ ಚಿನ್ನ ಖರೀದಿ ಸಂದರ್ಭದಲ್ಲಿ ಸಾಲ ಸೌಲಭ್ಯವನ್ನು ವಿಶೇಷವಾಗಿ ನೀಡುತ್ತಿದೆ. ಇಂದು ಶಾಖೆ ತೆರೆದಿದ್ದು ಮುಂದೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ. ವೆಂಕಟೇಶ್ ಅಂತಹ ಅಧಿಕಾರಿ ಜನಹಿತ ಅಧಿಕಾರಿಗಳು ಇಲ್ಲಿದ್ದಾರೆ ಎಂದರು.
ಒಬ್ಬರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಮತ್ತೊಬ್ಬರೂ ಸ್ವಾತಂತ್ರ್ಯ ಭಾರತ ಹೇಗಿರಬೇಕೆಂದು ತಿಳಿಸಿಕೊಟ್ಟ ಮಹನೀಯರನ್ನು ಸ್ಮರಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ಭಾರತದಲ್ಲಿ 150ಕ್ಕೂ ಹೆಚ್ಚು ಶಾಖೆ 1500 ಕ್ಕೂ ಹೆಚ್ಚು ಮಂದಿಗೆ ಉದ್ಯೋಗವನ್ನು ಧನಲಕ್ಷ್ಮಿ ಗ್ರೂಪ್ ನಿಂದ ನೀಡಲಾಗಿದೆ. ಮೊದಲ ಶಾಖೆಯನ್ನು ಮೈಸೂರಿನಲ್ಲಿ ತೆರೆದಿರುವುದು ಸ್ವಾಗತಾರ್ಹ. ಬಹುತೇಕ ಬ್ಯಾಂಕ್ ಗಳು ಲಾಭ, ಮೋಸದಿಂದ ಕೂಡಿವೆ. ಇಂತಹ ವೇಳೆ ಜನಪರವಾಗಿ ಸೇವೆ ನೀಡುವ ಉದ್ದೇಶದಿಂದ ಬ್ಯಾಂಕ್ ತೆರೆದಿರುವ ಎಲ್ಲರಿಗೂ ಶುಭಾಶಯಗಳು ಎಂದರು.
ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಅನೇಕ ಹಣಕಾಸಿನ ಸಂಸ್ಥೆಗಳನ್ನು ನೋಡಿದ್ದೇವೆ. ಎಲ್ಲರೂ ರಿಸರ್ವ್ ಬ್ಯಾಂಕ್ ಅಡಿಯಲ್ಲಿ ಅನುಮತಿ ಪಡೆದು ಎಲ್ಲಾ ನಿಬಂಧನೆಗಳ ಅಡಿಯಲ್ಲಿ ವ್ಯವಹಾರ ನಡೆಸಿಕೊಂಡು ಬಂದಿದ್ದಾರೆ.ಆದರೂ ಕೆಲವು ಬ್ಯಾಂಕ್ ಅವ್ಯವಹಾರ ನೋಡಿದರೆ ಭಯ ಆಗುತ್ತದೆ. ಠೇವಣಿದಾರರು, ಬ್ಯಾಂಕ್ ಗ್ರಾಹಕರು ಹಣಕ್ಕಾಗಿ ಹೋರಾಟ ಮಾಡುವುದನ್ನು ನೋಡಿದ್ದೇವೆ. ಇವರೆಲ್ಲರಿಗೂ ರಿಸರ್ವ್ ಬ್ಯಾಂಕ್ ನಿಬಂಧನೆ ಅನ್ವಯಿಸುವುದಿಲ್ಲವೆ ಎನಿಸುತ್ತದೆ ಎಂದರು.
ಇಂದಿರಾಗಾಂಧಿ ರಾಷ್ಟ್ರೀಕರಣ ಮಾಡಿ ಎಲ್ಲಾ ಬ್ಯಾಂಕ್ ನಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಿದರು. ಅದು ಈಗ ಮುಂದುವರೆದುಕೊಂಡು ಬಂದಿದೆ. 15 ಲಕ್ಷ ಕೋಟಿ ರೂ. ಬೃಹತ್ ಸಾಲ ಪಡೆದು ಸಣ್ಣ ಸಣ್ಣ ಕಂಪನಿಗೆ ಸಾಲ ಕೊಡುತ್ತೇವೆಂದು ತಿಳಿಸಿ ಸರ್ಕಾರಕ್ಕೆ ಶೇ.30 ರಷ್ಟು ತೆರಿಗೆಯನ್ನು ಕಡಿಮೆ ಮಾಡಿಕೊಂಡು ಸಾಲವನ್ನು ವಾಪಾಸ್ ಮಾಡದೇ ವಂಚಿಸಿರುವುದನ್ನು ನಾವು ನೋಡುತ್ತಿದ್ದೇವೆ. ಇವರಿಗೆ ಯಾವ ನಿಯಮವು ಅನ್ವಯಿಸುದಿಲ್ಲ ಎನಿಸುತ್ತದೆ ಎಂದರು.
ಸರ್ವರಿಗೂ ಸಮಪಾಲು ಸಿಗಬೇಕೆಂಬುದೇ ಸಂವಿಧಾನದ ಮೂಲ ಉದ್ದೇಶ.ಆದರೆ ಈಗ ಖಾಸಗೀಕರಣ ಹೆಚ್ಚಾಗಿದೆ. ಕೇಂದ್ರದ ಬಹುತೇಕ ಕಂಪನಿಗಳು ಖಾಸಗೀಕರಣ ಮಾಡಿ ಮೀಸಲಾತಿ ಹೋಗಿಸಲಾಗಿದೆ. ಹೀಗೆ ಅನೇಕ ರೀತಿಯಲ್ಲಿ ವಂಚಿಸಲಾಗುತ್ತಿದೆ ಎಂದು ಹೇಳಿದರು. ಗೋವಾ ರಾಜ್ಯದ ಮಾಜಿ ಡಿಸಿಎಂ ಚಂದ್ರಕಾಂತ್ ಕಾವ್ಲೇಕರ್, ಮಾಜಿ ಮಹಾಪೌರ ಪುರುಷೋತ್ತಮ್, ಧನಲಕ್ಷ್ಮಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ವಿಬಿಂದಾಸ್ ಕಾಡಂಗೊಟ್ಟು, ಸುನೀಲ್ ಕುಮಾರ್, ಗುರುಲಿಂಗಯ್ಯ, ಕುಮಾರ್, ಕೃಷ್ಣ, ಇಂದ್ರಾಣಿ ಇನ್ನಿತರರು ಉಪಸ್ಥಿತರಿದ್ದರು.