ಮೈಸೂರು : ಇತ್ತೀಚೆಗೆ ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ದಸಂಸ ಮೈಸೂರು ಜಿಲ್ಲಾ ಅಧ್ಯಕ್ಷ ಶಂಕರ್ ಮತ್ತು ಹಾರ‍್ಮೋನಿಯಂ ಮಾಸ್ಟರ್ ಚಂದ್ರು ಅವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿಯಿಂದ ಹೃದಯಸ್ಪರ್ಶಿಯಾಗಿ ಸನ್ಮನಿಸಲಾಯಿತು.
ನಗರದ ದಿ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ‍್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆರ್‌ಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎನ್.ಮೂರ್ತಿ, ಮಾಜಿ ಸಚಿವರಾದ ಕೋಟೆ ಎಂ.ಶಿವಣ್ಣ ಮತ್ತು ನಿವೃತ್ತ ಐಆರ್‌ಎಸ್ ಅಧಿಕಾರಿ ಭೀಮಾ ಶಂಕರ್ ಸೇರಿದಂತೆ ಅನೇಕ ಮುಖಂಡರು ಸಾಧಕರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಡಾ.ಎನ್.ಮೂರ್ತಿ ಮಾತನಾಡಿ, ಒಬ್ಬ ಹೋರಾಟಗಾರನಲ್ಲಿ ಸಹಸ್ರ ಸಹಸ್ರ ಸಾಹಿತಿಗಳು ಕವಿಗಳು ಇರುತ್ತಾರೆ, ಆದರೇ ಸಾಹಿತಿಯಲ್ಲಿ ಒಬ್ಬ ಹೋರಾಟಗಾರ ಇದ್ದರೆ ಈ ದೇಶಕ್ಕೆ ಅದ್ಭುತ ಕೊಡುಗೆ ಕೊಡಬಹುದು. ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ದಲಿತ ಸಮುದಾಯದ ದನಿಯಾಗಿರುವ ಶಂಕರ್ ಅವರನ್ನು ದೆಹಲಿಯಲ್ಲಿ ಗುರುತಿಸಿ ಪ್ರಶಸ್ತಿ ನೀಡಿರುವುದು ಅತ್ಯಂತ ಪ್ರಶಂಸನೀಯ, ನೂರಾರು ವರ್ಷಗಳಿಂದ ಗೌರವವೇ ಕಾಣದ ಈ ಸಮುದಾಯದ ಯುವಕರಿಗೆ ಗೌರವ ಸಿಕ್ಕಿದ್ದು, ಇದು ಬಂಡೆಯ ಮೇಲೆ ಚಿಗುರೊಡೆದ ಹಾಗೆ ನಮ್ಮನ್ನು ನಾವೇ ಪ್ರಶಂಶಿಸಿಕೊಳ್ಳಬೇಕಿದೆ ಎಂದರು. ಈ ಸಮಾಜದಲ್ಲಿ ಎಷ್ಟೇ ಹೋರಾಟ ಮಾಡಿದರೂ, ಯಾವುದೇ ಸಾಧನೆ ಮಾಡಿದರೂ ನಮ್ಮನ್ನು ಯಾರೂ ಗುರುತಿಸುವುದಿಲ್ಲ, ಇದಕ್ಕೆ ಮೇಲ್ವರ್ಗದವರು ಕಡಿವಾಣ ಹಾಕುತ್ತಾರೆ. ಇದಕ್ಕಾಗಿ ನಮ್ಮವರನ್ನು ನಾವೇ ಗೌರವಿಸಿ ಅಪ್ಪಿಕೊಳ್ಳಬೇಕಿದೆ. ಇದರಿಂದ ಹೋರಾಟಗಾರರಲ್ಲಿ ಸಮುದಾಯಕ್ಕೆ ದುಡಿಯುವ ಶಕ್ತಿ ಹೆಚ್ಚಾಗಿ ಆ ಶಕ್ತಿ ನಮ್ಮ ಸಮುದಾಯಕ್ಕೆ ಹೋರಾಟಗಳ ಮೂಲಕ ವಾಪಸ್ ಸಿಗುತ್ತದೆ ಎಂದು ಹೇಳಿದರು. ಅದೇ ರೀತಿ ಚಂದ್ರು ಅವರು ಕಲಾವಿದರಾಗಿ ಹತ್ತಾರು ವರ್ಷಗಳಿಂದ ಸಾಧನೆ ಮಾಡಿದ್ದು ಅವರಿಗೂ ಪ್ರಶಸ್ತಿ ಲಭಿಸಿರುವುದು ಸಂತೋಷದ ವಿಷಯ ಎಂದು ಹೇಳಿದರು.
ಮಾಜಿ ಸಚಿವರಾದ ಕೋಟೆ ಎಂ.ಶಿವಣ್ಣ ಮಾತನಾಡಿ, ಡಾ.ಎನ್.ಮೂರ್ತಿ ಹೆಸರು ಹೇಳಿದರೆ ಸರ್ಕಾರವೂ ಒಂದು ಕ್ಷಣ ನಡುಗುತ್ತದೆ. ಅವರು ಹಾಕುವ ಕೆಂಪುಶಾಲು ಹೋರಾಟದ ಸಂಕೇತ, ಇಂದು ನನಗೆ ಸಾಕಷ್ಟು ಕಾರ್ಯಕ್ರಮಗಳ ಒತ್ತಡ ಇದ್ದರೂ, ಈ ಕಾರ್ಯಕ್ರಮದ ಉದ್ಘಾಟನೆಗೆ ಮೂರ್ತಿ ಅವರು ಬರುತ್ತಾರೆ ಎಂದ ಮೇಲೆ ನಾನು ಹೋಗಲೇಬೇಕು ಎಂದು ನಿರ್ಧರಿಸಿ ಬಂದಿದ್ದೇನೆ. ಶಂಕರ್ ಒಬ್ಬ ಪ್ರಾಮಾಣಿಕ ಹೋರಾಟಗಾರ ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ಸಮಾಜಕ್ಕೆ ಸಿಕ್ಕ ಗೌರವ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಎನ್.ಮೂರ್ತಿ, ಕುಮಾರರಾಮು ಅವರನ್ನೂ ಸಹ ಗೌರವಿಸಲಯಿತು.
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಶಂಕರ್, ಚಂದ್ರು, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಡಾ.ಸಂಪತ್, ನಿವೃತ್ತ ಐಆರ್‌ಎಸ್ ಅಧಿಕಾರಿ ಭೀಮಾ ಶಂಕರ್, ಪೋಸ್ಟ್ ಮಾಸ್ಟರ್ ಹೆಚ್.ಸಿ.ಮಹದೇವಯ್ಯ, ಆದಿ ಜಾಂಬವ ಅಭಿವೃದ್ಧಿ ನಿಗಮದ ನಿರ್ದೇಶಕ ಕುಮಾರ್‌ರಾಮು, ಮುಖಂಡರಾದ ಗುರುಮಲ್ಲಪ್ಪ, ರಮೇಶ್, ರಂಗನಾಥ್, ಗುರುಮಲ್ಲಪ್ಪ, ಸಿದ್ದರಾಜು, ರೇವಣ್ಣ ಮತ್ತಿತರರು ಇದ್ದರು.
ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಈ ಬಗ್ಗೆ ತಿಳಿದಿರುವ ಕೆಲವೇ ಕೆಲವರು ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಅನುಭವಿಸುತ್ತಿದ್ದಾರೆ. ಉಳಿದ ತಳಮಟ್ಟದ ಜನರಿಗೆ ಸಿಗುತ್ತಿಲ್ಲ, ಇದನ್ನು ತಲುಪಿಸುವ ಕೆಲಸ ಮಾಡುವ ಮೂಲಕ ಸಮುದಾಯದ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು.
ಕೋಟೆ ಎಂ. ಶಿವಣ್ಣ, ಮಾಜಿ ಸಚಿವರು
ನನ್ನ ಪ್ರಾಮಾಣಿಕ ಹೋರಾಟವನ್ನು ಗುರುತಿಸಿ ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಪರಿಷತ್ತು, ಡಾ.ಬಿ.ಆರ್.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ ನೀಡಿದ್ದು, ನಮ್ಮ ಸಮುದಾಯದ ಜನರು ನನ್ನನ್ನು ಗುರುತಿಸಿ ಗೌರವವಿಸುವ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ.
ಶಂಕರ್, ದಸಂಸ ಮೈಸೂರು ಜಿಲ್ಲಾಧ್ಯಕ್ಷ
