ಮೈಸೂರು : ಮೂಡಲ ಮೈಸೂರು ನಿವೃತ್ತ ಯೋಧರ ಬಳಗದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ನಗರದ ರಿಂಗ್ ರಸ್ತೆಯಲ್ಲಿರುವ ವಿ.ಟಿ.ಯು ಕಾಲೇಜು ಸಮೀಪವಿರುವ ಪಂಚವಟಿ ಪಾರ್ಕಿನಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ಕಮಾಂಡರ್ ಎಸ್.ಎಂ.ಸಿಂಗ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಪಿಎಲ್ ಡಿ.ತಿಪ್ಪಣ್ಣ ಅವರು ಮಾತನಾಡಿ, ಕನ್ನಡ ಭಾಷೆ ಅತ್ಯಂತ ಪುರಾತನವಾದುದು, ಕ್ರಿಸ್ತ ಪೂರ್ವದಲ್ಲಿಯೇ ಗ್ರೀಕ್ ಭಾಷೆಯ ನಾಟಕಗಳಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡಲಾಗಿತ್ತು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
ಗ್ರೀಕರು ಕರ್ನಾಟಕದ ಜತೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು, ಇದರಿಂದ ಗ್ರೀಕ್ ನಾಟಕಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿದೆ ಎನ್ನಬಹುದಾಗಿದೆ. ಇದರಿಂದ ನಮ್ಮ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಮತ್ತು ಪುರಾತನ ಭಾಷೆ ಎಂಬುದು ತಿಳಿದುಬರುತ್ತದೆ. ಅಲ್ಲದೇ ಕ್ರಿಸ್ತಪೂರ್ವ ಕಾಲಘಟ್ಟದಲ್ಲೇ ಕನ್ನಡ ಭಾಷೆ ಇತ್ತು ಎಂಬುದನ್ನು ಜಗತ್ತಿಗೆ ಸಾರಿ ಹೇಳುತ್ತದೆ.
ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತವಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಇದೇ ವೇಳೆ ಅವರು ಸಭಿಕರಿಗೆ ೭೦ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
೧೯೫೬ರ ನವೆಂಬರ್ ೧ ರಂದು ಮೈಸೂರು ರಾಜ್ಯವು ರೂಪುಗೊಂಡಿತ್ತು.
ನಂತರ ಮೈಸೂರು ರಾಜ್ಯವು ನವೆಂಬರ್ ೧, ೧೯೭೩ ರಂದು ಕರ್ನಾಟಕ ಎಂದು ಮರುನಾಮಕರಣಗೊಂಡಿತು. ಈ ಹೆಸರಿನ ಬದಲಾವಣೆಯನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಜಾರಿಗೆ ತಂದರು ಎಂದು ವಿವರಿಸಿದರು.
ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಅದರ ಜತೆಗೆ ಇತ್ತೀಚೆಗೆ ಕನ್ನಡದ ಹೆಸರಾಂತ ಲೇಖಕಿ ಬಾನು ಮುಷ್ತಾಖ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ಸಹ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಮಕ್ಕಳಿಂದ ಹಾಡು, ನೃತ್ಯ, ಭರತನಾಟ್ಯ, ನರ್ತನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವೇದಿಕೆಯಲ್ಲಿ ನಿವೃತ್ತ ಯೋಧರು ಮತ್ತು ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿನ ಆಡಳಿತ ಅಧಿಕಾರಿ ಎಸ್‌ಇಪಿ, ಸಿ.ಎಲ್.ಆನಂದ್, ನಿವೃತ್ತ ಯೋಧರಾದ ಎಸ್‌ಜಿಟಿ ಮುರಳೀಧರ ಭಟ್, ನಿವೃತ್ತ ಯೋಧರು ಲೆಫ್ಟಿನೆಂಟ್ ಕರ್ನಲ್ ಕೆ.ಎ.ಗೀತಾ ಮತ್ತು ಮೂಡಲ ಮೈಸೂರು ನಿವೃತ್ತ ಯೋಧರ ಬಳಗದ ಎಲ್ಲ ಸದಸ್ಯರು ಮತ್ತು ಕುಟುಂಬವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.



