ಮೈಸೂರಿನಲ್ಲಿ ಮತ್ತೆ ಮುನ್ನಲೆಗೆ ಬಂದ ದಲಿತ ಸಿಎಂ ಕೂಗು! ಅಹಿಂದಾ ಸಮಾವೇಶಕ್ಕೆ ಪರ್ಯಾಯವಾಗಿ ದಲಿತ ಸಮಾವೇಶ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡಲು ಬಿಳಿಕೆರೆ ರಾಜು ಆಗ್ರಹ


 ವರದಿ: ನಿಷ್ಕಲ ಎಸ್., ಮೈಸೂರು

ಮೈಸೂರು : ನಿನ್ನೆಯಷ್ಟೇ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಅಹಿಂದಾ ಸಮಾವೇಶ ನಡೆಸಲು ಕೆಲವು ಮುಖಂಡರು ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೆ, ಭಾನುವಾರ ದಲಿತ ಮುಖಂಡ, ದೇವರಾಜ ಅರಸು ಅಭಿಮಾನಿಗಳ ಸಂಘದ ಅಧ್ಯಕ್ಷ ಮತ್ತು ಡಾ.ಜಿ.ಪರಮೇಶ್ವರ ಅವರ ಕಟ್ಟಾ ಅಭಿಮಾನಿ ಬಿಳಿಕೆರೆ ರಾಜು ಸುದ್ದಿಗೋಷ್ಠಿ ನಡೆಸಿ, ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಾ.ಜಿ.ಪರಮೇಶ್ವರ ಅವರಿಗೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆಯೂ ಹಲವು ಬಾರಿ ದಲಿತ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡುವ ಅವಕಾಶವಿದ್ದರೂ ರಾಜ್ಯದ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ಇದಕ್ಕೆ ಅವಕಾಶ ನೀಡಲಿಲ್ಲ, ಈ ಬಾರಿಯಾದರೂ ಡಾ.ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಬೇಕು ಇಲ್ಲದಿದ್ದಲ್ಲಿ ಕಾಂಗ್ರೆಸ್ ಪಕ್ಷಕ್ಕೆರ ಓಟು ಹಾಕಿರುವ ದಲಿತರು ಇನ್ನುಮುಂದೆ ಪರ್ಯಾಯ ರಾಜಕೀಯ ಚಿಂತನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೇ, ಶೀಘ್ರದಲ್ಲೇ ಅಹಿಂದಾ ಸಮಾವೇಶಕ್ಕೆ ಪರ್ಯಾಯವಾಗಿ ದಲಿತ ಸಮಾವೇಶ ಮಾಡುವ ಮೂಲಕ ಡಾ.ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಿ ಎಂದು ಒತ್ತಾಯ ಮಾಡಲಾಗುವುದು ಎಂದು ಹೇಳಿದ್ದಾರೆ.


ರಾಜ್ಯದಲ್ಲಿ ಜನಸಂಖ್ಯೆ ಆಧಾರದಲ್ಲಿ ದಲಿತರು ಮೊದಲ ಸ್ಥಾನದಲ್ಲಿದ್ದಾರೆ. ಶೇ.೮೦ ರಷ್ಟು ನಮ್ಮ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಿದ್ದಿವೆ. ಮೈಸೂರು ಜಿಲ್ಲೆಯಲ್ಲಿ ದಲಿತರ ಪ್ರಾಭಲ್ಯ ಹೆಚ್ಚಾಗಿದೆ. ಈ ಕಾರಣದಿಂದ ಪಿರಿಯಾಪಟ್ಟಣ, ಕೆ.ಆರ್.ನಗರ, ಹೆಚ್.ಡಿ.ಕೋಟೆ ಮುಂತಾದ ಕಡೆ ಕಾಂಗ್ರೆಸ್ ಗೆಲುವು ಕಂಡಿದೆ. ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ದಲಿತರು ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಇದನ್ನು ಅರ್ಥಮಾಡಿಕೊಂಡು ಸಿಎಂ ಸಿದ್ದರಾಮಯ್ಯ ಸೇರಿದಂತೆ ಅಹಿಂದಾ ನಾಯಕರು ಈ ಬಾರಿ ದಲಿತ ನಾಯಕರಾದ ಡಾ.ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಇದಕ್ಕೆ ಪೂರ್ವಭಾವಿಯಾಗಿ ಮೈಸೂರಿನಲ್ಲಿ ಶೀಘ್ರದಲ್ಲೆ ದಲಿತ ಸಮಾವೇಶ ನಡೆಸಿ ಡಾ.ಜಿ.ಪರಮೇಶ್ವರ ಅವರನ್ನು ಸಿಎಂ ಸ್ಥಾನಕ್ಕೆ ಹಕ್ಕೊತ್ತಾಯ ಮಾಡಲಾಗುವುದು ಎಂದರು. 

ಸುದ್ದಿಗೋಷ್ಠಿಯಲ್ಲಿ  ದಲಿತ ಮುಖಂಡರಾದ ಕೊಳಘಟ್ಟ ಕೃಷ್ಣ, ವಕೀಲರಾದ ಹೆಚ್.ನಟರಾಜು, ಮಂಜುನಾಥ್, ಗುಂಡಣ್ಣ, ಮುದ್ದು ಚಲುವಯ್ಯ, ಶಿವರಾಜು, ಸುನೀಲ್ ಕುಮಾರ್, ಅಣ್ಣಯ್ಯಚಾರಿ ಮುಂತಾದವರು ಇದ್ದರು.

ಕಾಂಗ್ರೆಸ್ ನಮಗೆ ಬಾಕಿ ಕೊಡಬೇಕಿದೆ

೨೦೧೩ ರಲ್ಲಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ವ್ಯವಸ್ಥಿತವಾಗಿ ಸಂಚು ನಡೆಸಿ ಸೋಲಿಸಲಾಯಿತು. ೨೦೧೮ ರಲ್ಲಿ ದಲಿತರೇ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು. ೨೦೨೩ ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ದಲಿತ ಸಿಎಂ ಕೂಗು ಅಡಗಿಸಲಾಯಿತು. ನಾವು ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇವೆ. ನಮ್ಮ ನಾಯಕರನ್ನು ಮುಖ್ಯಮಂತ್ರಿ ಮಾಡಲೇಬೇಕು.

ಬಿಳಿಕೆರೆ ರಾಜು, ದಲಿತ ಮುಖಂಡರು