ನಾಗನಹಳ್ಳಿ ರತ್ನ ಪ್ರಶಸ್ತಿ ಪುರಸ್ಕೃತ ಜಗದೀಶ್‌ಗೌಡರಿಗೆ ಬಂಗಾರದ ಉಂಗುರ ತೊಡಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು


 ವರದಿ : ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ತಾಲ್ಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿದೇವಿ ದೇವಾಲಯವನ್ನು ಪುನರ್‍ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಮುಖಂಡರಾದ ನಾಗನಹಳ್ಳಿ ಜಗದೀಶ್ ಗೌಡ ಅವರಿಗೆ ಆದಿ ಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಸೋಮವಾರ ಶ್ರೀ ಲಕ್ಷ್ಮಿದೇವಿ ಭಾವಚಿತ್ರವುಳ್ಳ ಬಂಗಾರದ ಉಂಗುರ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು.

ಸೋಮವಾರ ಬೆಳಗ್ಗೆ ನಾಗನಹಳ್ಳಿ ಗ್ರಾಮದಲ್ಲಿನ ಶ್ರೀ ಲಕ್ಷ್ಮಿದೇವಿ ದೇವಾಲಯದ ಪ್ರತಿಷ್ಠಾಪನೆಯ 48ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಗೆ ಪೂಜೆ ಸಲ್ಲಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಜಗದೀಶಗೌಡ ಅವರನ್ನು ಸನ್ಮಾನಿಸಿ ಮಾತನಾಡಿದರು.

ನಾಗನಹಳ್ಳಿ ಗ್ರಾಮಸ್ಥರು ಈ ಹಿಂದಿನಿಂದಲೂ ತಾವು ಬೆಳೆದ ದವಸ ಧಾನ್ಯಗಳನ್ನು ಶ್ರೀಮಠಕ್ಕೆ ನೀಡುವ ಮೂಲಕ ಮಠದ ಸೇವೆಯನ್ನು ಮಾಡುತ್ತಾ ಬಂದಿದ್ದೀರಿ, ಇದೀಗ ನಿಮ್ಮ ಗ್ರಾಮದಲ್ಲೇ ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪಿಸಿಕೊಳ್ಳುವ ಮೂಲಕ ಸಂಪತ್ತು, ಐಶ್ವರ್ಯವನ್ನು ನಿಮ್ಮದಾಗಿಸಿಕೊಂಡಿದ್ದೀರಿ, ಮನುಷ್ಯನಿಗೆ ಐಶ್ವರ್ಯ ಬೇಕು, ಆದರೆ ಅದಕ್ಕೂ ಮಿತಿ ಇದೆ. ಸಂಪತ್ತು ಹೂವಿನಂತೆ ಹಗುರವಾಗಿರಬೇಕು, ಬಂಡೆಯಂತಿರಬಾರದು. ಸಂಪಾದಿಸಿದ ಹಣವನ್ನು ಮತ್ತೊಬ್ಬರಿಗೆ ಸಹಾಯ ಮಾಡುವುದು ಮತ್ತು ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದರು.

ಕಳೆದ ಸೆಪ್ಟಂಬರ್ 24 ರಂದು ಈ ದೇವಾಲಯದ ಪ್ರತಿಷ್ಠಾಪನೆ ಆಗಿತ್ತು, ಅಂದು ಚುಂಚನಗಿರಿ ಮಠದಲ್ಲಿ ಕಾರ್ಯಕ್ರಮ ಇದ್ದ ಕಾರಣ ನಾವು ಬರಲಾಗಲಿಲ್ಲ, ಈ ಕಾರಣಕ್ಕಾಗಿ ಇಂದು ಬಂದಿದ್ದೇವೆ ಎಂದು ಅವರು ಹೇಳಿದರು.

ಬಿಜಪಿ ಮುಖಂಡರಾದ ಜಗದೀಶ್‍ಗೌಡ ಅವರು ಮಾತನಾಡಿ, ಕಳೆದ ಸೆಪ್ಟಂಬರ್ 24 ರಂದು ನಾಗನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿದೇವಿ ದೇವಾಲಯದ ಉದ್ಘಾಟನೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಆಹ್ವಾನ ಮಾಡಲಾಗಿತ್ತು, ಆದರೇ, ಅಂದು ನವರಾತ್ರಿ ಪೂಜಾ ಕಾರ್ಯಗಳು ಇದ್ದ ಕಾರಣ ಶ್ರೀಗಳು ಬರಲಾಗಲಿಲ್ಲ, ಇಂದು ನಮ್ಮ ಗ್ರಾಮಕ್ಕೆ ಆಗಮಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ನಮಗೆ ಆಶೀರ್ವಾದ ಮಾಡಿದ್ದಾರೆ. 250 ರಿಂದ 300 ವರ್ಷ ಹಳೆಯದಾದ ಈ ಲಕ್ಷ್ಮಿದೇವಿ ದೇವಾಲಯ ಶಿಥಿಲವಾಗಿತ್ತು, ಒಳಗೆ ನಾಲ್ಕು ಜನ ಕೂರಲು ಆಗುತ್ತಿರಲಿಲ್ಲ, ಇದನ್ನು ಗ್ರಾಮಸ್ಥರ ಜತೆಗೂಡಿ ಹೊಸದಾಗಿ ನಿರ್ಮಾಣ ಮಾಡಲು ನಿರ್ಧರಿಸಿದಾಗ, ಕರೋನ ಬಂತು, ಆಗ ಕಾಮಗಾರಿ ಕುಂಠಿತವಾಯಿತು. ನಂತರ ಅಂದು ಸಂಸದರಾಗಿದ್ದ ಪ್ರತಾಪ್ ಸಿಂಹ ಅವರು ನಮ್ಮ ದೇವಾಲಯಕ್ಕೆ ತಮ್ಮ ಅನುದಾನ ನೀಡಿ ಸಹಾಯ ಮಾಡಿದರು. ಇದರ ಜತೆ ಗ್ರಾಮಸ್ಥರ ಸಹಕಾರದಿಂದ ಈ ದೇವಾಲಯ ಇಂದು ಭವ್ಯವಾಗಿ ನಿರ್ಮಾಣವಾಗಿದೆ ಎಂದು ಹೇಳಿದರು.

ಜಗದೀಶಗೌಡ ಅವರಿಗೆ ಈ ಹಿಂದೆಯೇ ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೌಮ್ಯನಾಥನಂದ ಸ್ವಾಮೀಜಿಗಳು ನಾಗನಹಳ್ಳಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಸಂದರ್ಭದಲ್ಲಿ ಮನೆ ಮಾದೇಗೌಡ ಎಂದೇ ಖ್ಯಾತರಾಗಿರುವ ಅಂದಿನ ಸಿಐಟಿಬಿ ಅಧ್ಯಕ್ಷರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ.ಮಾದೇಗೌಡ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಶ್ರೀರಂಗಪಟ್ಟಣ ತಾಲ್ಲೂಕು ಬಿಜೆಪಿ ಮುಖಂಡರಾದ ಸಚ್ಚಿದಾನಂದ, ಜಿಪಂ ಮಾಜಿ ಸದಸ್ಯರಾದ ದಿನೇಶ್, ಮಹದೇವಪ್ಪ, ಮಹೇಶ್, ಸಿಂಗಪ್ಪ, ಶ್ರೀಕಂಠಯ್ಯ, ಯಾದವೇಂದ್ರ, ಸತೀಶ್, ಪದ್ಮರಾಜು, ಕೃಷ್ಣ ಇತರೆ ಗ್ರಾಮಸ್ಥರು, ಮುಖಂಡರು ಇದ್ದರು.

ರೈತರು ಅನ್ನದಾತರಾಗಿದ್ದಾರೆ. ಆದರೇ ಇಂದು ಬಹಳಷ್ಟು ರೈತರು ತಮ್ಮ ಜಮೀನುಗಳನ್ನು ಮಾರಿಕೊಳುವುದು ಕಂಡು ಬಂದಿದೆ. ಆದರೇ, ಯಾವುದೇ ಕಾರಣಕ್ಕೂ ಜಮೀನು ಮಾರಬೇಡಿ.

ಪ್ರತಾಪ್ ಸಿಂಹ, ಮಾಜಿ ಸಂಸದರು