ಅಜೀಜ್ ಸೇಠ್ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ


 ವರದಿ : ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ಮತಗಳ್ಳತನ ಒಂದು ಪ್ರಮುಖ ವಿಷಯವಾಗಿ ಹೊರಹೊಮ್ಮಿದ್ದು, ಇದರ ವಿರುದ್ಧ ದೇಶದ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತ್ತು ಚುನಾವಣಾ ಆಯೋಗವು ಮತಗಳ್ಳತನದ ಬಗ್ಗೆ ಎಚ್ಚರಿಕೆ ವಹಿಸಲು ಕೋರಿ ರಾಷ್ಟ್ರವ್ಯಾಪಿ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಪಕ್ಷ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ತನ್ವೀರ್ ಸೇಠ್ ಹೇಳಿದರು.

ನಗರದ ನೆಕ್ಸಸ್ ಸಿಟಿ ಸೆಂಟರ್ ವೃತ್ತದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ರಾರ್ ಮೊಹಮ್ಮದ್ ಮತ್ತು ಎನ್‌ಆರ್ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ರಂ ನೇತೃತ್ವದಲ್ಲಿ ಶನಿವಾರ ಏರ್ಪಡಿಸಿದ್ದ ’ವೋಟ್ ಚೋರಿ’ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚುನಾವಣಾ ಆಯೋಗ ಈ ದೇಶದಲ್ಲಿ ಅದರಲ್ಲೂ ಒಬ್ಬ ವಿದೇಶಿ ಮಹಿಳೆಗೆ ೧೮ ಕಡೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದರೆ ನಾಚಿಕೆಗೇಡು. ಚುನಾವಣಾ ಆಯೋಗ ನೆಪ ಮಾತ್ರಕ್ಕೆ ಇದೆ ಎನ್ನುವ ಭಾವನೆ ದೇಶದ ಮತದಾರರಲ್ಲಿ ಮೂಡಿದೆ. 

ಒಬ್ಬರಿಗೆ ಒಂದೇ ಮತ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೇ ಆ ಒಂದು ಮತವೂ ಚಲಾಯಿಸದಂತೆ ಮತಗಳ್ಳತನ ನಡೆಯುತ್ತಿದೆ. ಒಂದು ಪಕ್ಷದ ವಿರುದ್ಧ ಇದ್ದವರ ಮತಗಳನ್ನು ತೆಗೆದುಹಾಕುವುದು, ಬೇರೆ ಬೇರೆ ಕಡೆಯಿಂದ ಹೆರನ್ನು ತಂದು ಸೇರಿಸುವುದು ನಡೆಯುತ್ತಿದೆ. ನಾನು ೬ ಬಾರಿ ಶಾಸಕನಾಗಿ ೨ಬಾರಿ ಸಚಿವನಾಗಿದ್ದೇನೆ. ಈ ಹಿಂದೆ ನನ್ನ ಹೆಸರನ್ನೇ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಈಗಲೂ ಅನೇಕರ ಹೆಸರು ಮತದಾರರ ಪಟ್ಟಿಯಿಂದಲೇ ನಾಪತ್ತೆ ಆಗಿದೆ, ನಮ್ಮ ಕಾರ್ಯಕರ್ತರು ಮತ್ತು ಮುಖಂಡರು, ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅದರಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವೇ ಎಂದು ನೋಡಿಕೊಂಡು ಆಕ್ಷೇಪಣೆ ಸಲ್ಲಿಸಬೇಕು ಎಂದರು.

ಯುವ ಕಾಂಗ್ರೆಸ್ಸಿನ ರಾಜ್ಯ ಕಾರ್ಯದರ್ಶಿ ಅಬ್ರಾರ್ ಮೊಹಮ್ಮದ್ ಮಾತನಾಡಿ, ದೇಶದೆಲ್ಲೆಡೆ ’ವೋಟ್‌ಚೋರಿ’ ನಡೆಸುವ ಮೂಲಕ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದಿದೆ. ದೇಶಾದ್ಯಂತ ಮತಗಳ್ಳತನ ನಡೆದಿರುವ ಬಗ್ಗೆ ಬೆಂಗಳೂರಿನ ಮಹದೇವಪುರ ಕ್ಷೇತ್ರ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳಲ್ಲಿ ನಡೆದಿರುವ ಮತಗಳ್ಳತನ ಕುರಿತು ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ದೇಶದ ಜನತೆಗೆ ಸ್ಪಷ್ಟವಾಗಿ ವಿವರಣೆ ನೀಡಿದ್ದಾರೆ. ಹರ‍್ಯಾಣದಲ್ಲಿ ನಡೆದಿರುವ ೨೫ ಲಕ್ಷ ಮತಗಳ್ಳತನದ ಬಗ್ಗೆಯೂ ಅವರು ನಿಖರವಾದ ಮಾಹಿತಿ ನೀಡಿದ್ದಾರೆ. ದೇಶದ ಮತದಾರರು ಮತಗಳ್ಳತನ ಬಗ್ಗೆ ಗಂಭೀರ ಚಿಂತನೆ ನಡೆಸಿ ಮುಂಬರುವ ಚುನಾವಣೆಗಳಲ್ಲಿ ಜಾಗೃತಿ ವಹಿಸುವುದು ಅಗತ್ಯ, ಬ್ರೆಜಿಲಿಯನ್ ಮಾಡೆಲ್ ಒಬ್ಬರ ಹೆಸರು ೨೩ ಕಡೆ ಮತದಾರರ ಪಟ್ಟಿಯಲ್ಲಿ ಇದೆ. ಇಂತಹ ಹಲವು ಪ್ರಕರಣಗಳು ದೇಶದಲ್ಲಿ ನಡೆದಿವೆ. ಬಿಹಾರ ಚುನಾವಣೆಯಲ್ಲೂ ಮತಗಳ್ಳತನ ನಡೆದಿದೆ. ದೇಶದಲ್ಲಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗುತ್ತಿದೆ. ಈ ಮತಗಳ್ಳತನದ ಬಗ್ಗೆ ಮತದಾರರು ಜಾಗೃತಿ ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್, ಎನ್‌ಆರ್ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸೈಯದ್ ರಿಜ್ವಾನ್, ಅಜೀಜ್ ಸೇಠ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಸಕ್ಲೇನ್, ಕಾರ್ಯದರ್ಶಿ ಮೀರ್ ಖುಸ್ರು, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಮತ್ತಿತರ ಮುಖಂಡರು ಇದ್ದರು.