ವರದಿ : ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ನಗರದ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ನ.9ರಂದು ಸಂಜೆ 4 ಗಂಟೆಗೆ ಹೂಟಗಳ್ಳಿಯಲ್ಲಿ ಕನ್ನಡಾಂಬೆ ಹಬ್ಬ, ಕನ್ನಡಾಂಬೆ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ತಿಳಿಸಿದರು.
ಪಾಂಡವಪುರ ತಾಲ್ಲೂಕು ಬೇಬಿಬೆಟ್ಟ ಶ್ರೀ ರಾಮಯೋಗೇಶ್ವರ ಮಠದ ಶ್ರೀಶಿವಬಸವಸ್ವಾಮೀಜಿ ಮತ್ತು ಕೊಳ್ಳೇಗಾಲ ತಾಲ್ಲೂಕು ಚಿಲಕವಾಡಿ ಶ್ರೀ ಗುರುರಾಮಯೋಗೀಶ್ವರ ಮಠದ ಶ್ರೀ ಇಮ್ಮಡಿ ಗುರುಲಿಂಗಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕೆ.ಜಿ.ದೇವಪಟ್ಟಣ ಶ್ರೀ ಶಾರದಾ ಪೀಠ ಶೃಂಗೇರಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಮಠದ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಮ್ನಾಯದ ಶ್ರೀ ಬಾಲಮಂಜುನಾಥ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ 9 ಜನ ಸಾಧಕರಿಗೆ ಕನ್ನಡಾಂಬೆರತ್ನ ಪ್ರಶಸ್ತಿಯನ್ನು ಅರ್ಜುನ್ ಅವಧೂತ ಮಹಾರಾಜ ಗುರೂಜಿ ಅವರು ಪ್ರದಾನ ಮಾಡಲಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡಾಂಬೆ ವಾರ್ಷಿಕ ಸಂಚಿಕೆಯನ್ನು ಬಿಜೆಪಿ ಯುವ ಮುಖಂಡ ಕವೀಶ್‍ಗೌಡ ಅವರು ಲೋಕಾರ್ಪಣೆ ಮಾಡುವರು ಎಂದರು.
ಹೂಟಗಳ್ಳಿಯ ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳಿಂದ ಕನ್ನಡಾಂಬೆಯ ಅದ್ದೂರಿ ಮೆರವಣಿಗೆ ಸಾಗಲಿದೆ. ಐದು ಸರ್ಕಾರಿ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಮಹಿಳಾ ಜಾದುಗಾರ್ತಿ ಸುಮ ರಾಜ್‍ಕುಮಾರ್ ಮಾತನಾಡುವ ಗೊಂಬೆಯ ವಿಶೇಷ ಮನೋರಂಜನ ಕಾರ್ಯಕ್ರಮವನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಕನ್ನಡಾಂಬೆ ರಕ್ಷಣಾ ವೇದಿಕೆಯ ನಂಜುಂಡ, ಸಂತೋಷ್, ಹೊನ್ನೆಗೌಡ, ಸಿಂಧುವಳ್ಳಿ ಶಿವಕುಮಾರ್, ಮಹದೇವಸ್ವಾಮಿ, ಲೋಕೇಶ್, ಇ.ವಿ. ನಾಗರಾಜ್, ಗೌತಮ್, ಶ್ರೀನಿವಾಸ್, ಅಮರ್ ನಾಥ್, ಕಿಕ್ಕೇರಿ ಕುಮಾರ್, ಕಿರಣ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

