ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಎತ್ತಿನಗಾಡಿಯಲ್ಲಿ ಕನ್ನಡಾಂಬೆಯ ಧಿರಿಸುತೊಟ್ಟ ಯುವತಿಯನ್ನು ಮೆರವಣಿಗೆ ಮೂಲಕ ಒಳಾಂಗಣ ಕ್ರೀಡಾಂಗಣದ ವೇದಿಕೆಗೆ ಕರೆತರಲಾಯಿತು.
ಈ ವೇಳೆ ದಾರಿಯುದ್ದಕ್ಕೂ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ವಾದ್ಯಗಳ ಸದ್ದಿಗೆ ಹೆಜ್ಜೆ ಹಾಕುತ್ತಾ, ಕುಣಿದು ಕುಪ್ಪಳಿಸಿ ಮೆರವಣಿಗೆ ಮೂಲಕ ಒಳಾಂಗಣ ಕ್ರೀಡಾಂಗಣಕ್ಕೆ ಬಂದರು.
ಮೆರವಣಿಯಲ್ಲಿ ವಿವಿಧ ವಾದ್ಯಗಳು, ವೀರಗಾಸೆ ಕುಣಿತ ಸಹ ಏರ್ಪಡಿಸಲಾಗಿತ್ತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನು ಮಟಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಕವಿಗಳೂ ಆದ ಡಾ. ಸಂತೋಷ್ ಚೊಕ್ಕಾಡಿ ಅವರು ಉದ್ಘಾಟಿಸಿ ಮಾತನಾಡಿ, ಕನ್ನಡದ ಸಂಭ್ರಮ ಪ್ರತಿದಿನದ ಸಂಭ್ರಮವಾಗಬೇಕು, ನೆಲ, ಜಲ ಭಾಷೆಯನ್ನು ಪ್ರೀತಿಸುವ ಮನೋಧರ್ಮ ಎಲ್ಲರಲ್ಲೂ ಬೆಳೆಯಬೇಕು ಇದರಿಂದ ಕನ್ನಡ ಭಾಷೆ ವಿಸ್ತರಿಸುತ್ತದೆ. ಭಾಷೆ ನಮ್ಮನ್ನು ಸಂಬಂಧಗಳೊಂದಿಗೆ, ಸಂಪರ್ಕದೊಂದಿಗೆ ಜೋಡಿಸಬೇಕು ಎಂದರು.
ರೆಕ್ಟರ್ ಡಾ. ಲೂರ್ದ್ ಪ್ರಸಾದ್ ಜೋಸೆಫ್ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಯನ್ನು ಪ್ರೀತಿಸಬೇಕು, ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಕನ್ನಡ ಭಷೆಯ ಬಗ್ಗೆ ಪ್ರೀತಿ ಮೂಡಿಸಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಇದು ಸಾಧ್ಯವಾಗುತ್ತದೆ. ಹೀಗಾಗಿ ನಮ್ಮ ಕಾಲೇಜಿನಲ್ಲಿ ಇಂದು ಕನ್ನಡದ ಹಬ್ಬವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಖ್ಯಾತ ಗಾಯಕರಾದ ಉಪಾಸನಾ ಮೋಹನ್ ತಂಡದವರಿಂದ ಭಾವ ಗೀತೆಗಳ ಕಾರ್ಯಕ್ರಮ ಮತ್ತು ಖ್ಯಾತ ಗಾಯಕರಾದ ಪಂಚಮ್ ಹಳಿಬಂಡಿ, ನಾಗಚಂದ್ರಿಕ ಭಟ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ.ಜೆ.ಡಿ.ಸಲ್ಡಾನ, ಕ್ಯಾಂಪಸ್ ಆಡಳಿತಾಧಿಕಾರಿ ರೆ.ಫಾ.ಜ್ಞಾನಪ್ರಗಾಸಂ, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಎ.ಟಿ.ಸದೆಬೋಸ್, ಡಾ.ಶಿವರಾಜ್, ನಿಂಗಣ್ಣನವರ್ ಇನ್ನಿತರರು ಇದ್ದರು.
ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಲ್ಲದೇ ವೇದಿಕೆಯಲ್ಲಿ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.






