ವರದಿ: ನಿಷ್ಕಲ ಎಸ್.ಗೌಡ. ಮೈಸೂರು
ಮೈಸೂರು : ರಾಜ್ಯದಲ್ಲಿ ಪದೇ ಪದೇ ದಲಿತ ಮುಖ್ಯಮಂತ್ರಿ ಕೂಗು ಕೇಳಿಬರುತ್ತಿದ್ದು, ಕಾಂಗ್ರೆಸ್ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಜಯಭೇರಿ ಬಾರಿಸಬೇಕಾದರೆ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಡಿ.ದೇವರಾಜ ಅರಸು ಅಭಿಮಾನಿ ಬಳಗದ ಅಧ್ಯಕ್ಷರು ಮತ್ತು ಹಿರಿಯ ಮುಖಂಡರಾದ ಬಿಳಿಕೆರೆ ರಾಜು ಒತ್ತಾಯಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ 2ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಗಿತ್ತು, ಬಳಿಕ ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಯಶಸ್ಸು ಕಂಡು ಅಧಿಕಾರಕ್ಕೆ ಬಂತು, ವಾಸ್ತವವಾಗಿ ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿ ಆಗಬೇಕಿತ್ತು, ಆದರೇ ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ತಪ್ಪಿತು, ಇದಕ್ಕೆ ಏನೇ ಕಾರಣಗಳಿದ್ದರೂ ರಾಜ್ಯದಲ್ಲಿ ದಲಿತ ಸಿಎಂ ಇನ್ನೂ ಕನಸಾಗಿ ಉಳಿದಿದೆ, ಇದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿರುವ ದಲಿತ ಸಮುದಾಯಕ್ಕೆ ಬೇಸರವಾಗಿದೆ, ಸಧ್ಯ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಎಂಬ ಕೂಗು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಅಂತಹ ಸಂದರ್ಭವೇನಾದರೂ ಒದಗಿ ಬಂದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜು ಖರ್ಗೆ, ಕೆ.ಹೆಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ, ಡಾ.ಹೆಚ್.ಸಿ.ಮಹದೇವಪ್ಪ ಮುಂತಾದ ಪ್ರಮುಖ ದಲಿತ ನಾಯಕರ ಹೆಸರನ್ನು ಪರಿಗಣಿಸಬೇಕೆಂದು ಬಿಳಿಕೆರೆ ರಾಜು ಆಗ್ರಹಿಸಿದರು.
ಇತ್ತೀಚೆಗೆ ಸಚಿವರಾದ ಸಂತೋಷ್ ಲಾಡ್, ಜಮೀರ್ ಅಹಮದ್ ಮತ್ತಿತರರು ಕಾಂಗ್ರೆಸ್ ಪಕ್ಷಕ್ಕೆ ಕೆಲವರು ಅನಿವಾರ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಹಲವು ಮುಖಂಡರಿಗೆ ಅಪಮಾನ ಮಾಡಿದ್ದಾರೆ. ಹಾಗಾದರೆ, ಸತತವಾಗಿ 6 ಬಾರಿ ಜಯಗಳಿಸಿದ ತನ್ವೀರ್ ಸೇಠ್, ಕೆ.ಹೆಚ್.ಮುನಿಯಪ್ಪ, ಡಾ.ಹೆಚ್.ಸಿ.ಮಹದೇವಪ್ಪ ಅವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ ಅಲ್ಲವೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶೇ.100 ರಷ್ಟು ಬೆಂಬಲ ನೀಡಿದ, ಮುಸಲ್ಮಾನರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವುದು ಬೇಡವೇ, ದಲಿತರು ಮುಖ್ಯಮಂತ್ರಿ ಆಗಬಾರದೇ? ಧರ್ಮಸಿಂಗ್, ವೀರಪ್ಪ ಮೋಯಿಲಿ, ಬಂಗಾರಪ್ಪ ಮುಂತಾದ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾರೆ, ಆದರೇ, ಹೆಚ್ಚು ಜನಸಂಖ್ಯೆ ಹೊಂದಿರುವ ದಲಿತಗರು, ಮುಸಲ್ಮಾನರು ಇಂದಿಗೂ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ ಎಂದು ಬೇಸರಿಸಿದ ಅವರು, ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾಗುವುದೇ ಆದರೇ ಮೊದಲು ದಲಿತರಿಗೆ ಅವಕಾಶ ನೀಡಿ, ಮಾನ್ಯ ಡಿ.ಕೆ.ಶಿವಕುಮಾರ್ ಅವರಿಗೆ ಇನ್ನೂ ಚಿಕ್ಕ ವಯಸ್ಸು ಇರುವ ಕಾರಣ ಮುಂದೆ ಅವರಿಗೂ ಆ ಸ್ಥಾನ ಲಭಿಸುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಳಘಟ್ಟ ಕೃಷ್ಣ, ಶಿವರಾಜು, ನಾಗರಾಜು, ಲೋಕೇಶ, ಸಿ.ಮಂಜುನಾಥ್ ಇನ್ನಿತರರು ಇದ್ದರು.


