ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಗರಡಿಕೇರಿ ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಮಹಾ ಉತ್ಸವ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ನಗರದ ಗರಡಿಕೇರಿ ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಮಹಾ ಉತ್ಸವವು ಸೋಮವಾರ ಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದ ಟ್ರಸ್ಟ್‍ನ ಗೌರವಾಧ್ಯಕ್ಷರಾದ ಎಂ.ಶಿವಣ್ಣ ಮತ್ತು ಗುಡ್ಡಪ್ಪ ಎಂ.ಎಸ್.ರವಿಕುಮಾರ್ ಸೇರಿದಂತೆ ಟ್ರಸ್ಟ್‍ನ ಎಲ್ಲ ಪದಾಧಿಕಾರಿಗಳ ನೇತೃತ್ವದಲ್ಲಿ ಮಹಾ ಉತ್ಸವವು ವೈಭವದಿಂದ ಜರುಗಿತು, ವಿವಿಧ ವಾದ್ಯಗಳು, ಕಂಸಾಳೆ, ನಾದಸ್ವರ ಸೇರಿದಂತೆ ಹಲವು ಕಲಾ ತಂಡಗಳು ಮೆರವಣಿಯಲ್ಲಿ ಭಾಗಿಯಾಗಿದ್ದವು.  

ಸೋಮವಾರ ಬೆಳಗ್ಗೆ 6 ಗಂಟೆಗೆ ಶ್ರೀ ಮಲೆಮಹದೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ ನಡೆಯಿತು. 10 ಗಂಟೆಗೆ ಶ್ರೀ ಮಲೆಮಹದೇಶ್ವರಸ್ವಾಮಿ ಮಹಾ ಉತ್ಸವವು ರಾಜಬೀದಿಗಳಲ್ಲಿ ಮೆರವಣಿಗೆ ಹೊರಟು ಸಂಜೆ 6 ಗಂಟೆಗೆ ದೇವಸ್ಥಾನ  ತಲುಪಿತು. 

ಮೆರೆವಣಿಗೆಯಲ್ಲಿ ಬೆಳಗೆರೆ ಹುಂಡಿ ಗ್ರಾಮಸ್ಥರಿಂದ ಕಂಸಾಳೆ ಪದ, ಗಣೇಶ್ ಮತ್ತು ವೃಂದದವರಿಂದ ಬ್ಯಾಂಡ್ ಸೆಟ್, ಗೊರವರ ಕುಣಿತ, ವೀರಗಾಸೆ ಕುಣಿತ, ಮೈಸೂರಿನ ಸಿದ್ದರಾಮು ತಂಡದವರಿಂದ ಬೀರೇಶ್ವರ ಕುಣಿತ ಮತ್ತು ತಮಟೆ, ನಗಾರಿ, ವಾದ್ಯ ಹಾಗೂ ಡೊಳ್ಳು ಕುಣಿತ, ನಾಗಸ್ವರ, ಮಂಗಳವಾದ್ಯಗಳಿಂದ ಕೂಡಿತ್ತು. 

ಲೇಟ್ ಬೆಣ್ಣೆ ಕೃಷ್ಣಪ್ಪ ಮತ್ತು ಅಳಿಯ ಲೇಟ್ ಚಂದ್ರು ಅವರ ಕುಟುಂಬ ವರ್ಗದವರು ಮೆರವಣಿಗೆ ಪ್ರಸಾದ ಸೇವಾರ್ಥದಾರರಾಗಿದ್ದರು. ಸಾವಿರಾರು ಭಕ್ತರು ಮೆರವಣಿಗೆ ಭಾಗಿಯಾಗಿದ್ದರು, ಬಡಾವಣೆಯ ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು, ಮನೆಯವರು ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.