ಎಂ.ರಸೂಲ್ ನೇತೃತ್ವದಲ್ಲಿ ಮತಗಳ್ಳತನದ ವಿರುದ್ಧ ಮೈಸೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸಹಿ ಸಂಗ್ರಹ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ಮತಗಳ್ಳತನ ಕುರಿತು ಮೈಸೂರಿನಲ್ಲಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಸೋಮವಾರ ಬೆಳಗ್ಗೆ ನಗರದ ಬೀದಿ ಬದಿ ವ್ಯಾಪಾರಿಗಳಿಂದ ಸಹಿ ಸಂಗ್ರಹ ಅಭಿಯಾನ ನಡೆಯಿತು.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಎಂ.ರಸೂಲ್ ನೇತೃತ್ವದಲ್ಲಿ 3ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಲಾಯಿತು. 

ಆನನಿಬಿಡ ಸಯ್ಯಾಜಿರಾವ್ ರಸ್ತೆಯಲ್ಲಿ ವ್ಯಾಪಾರ ಮಾಡುವ ಸಾವಿರಾರು ಬೀದಿ ಬದಿ ವ್ಯಾಪಾರಿಗಳು ಮತಗಳ್ಳತನದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಎಂ.ರಸೂಲ್ ಮಾತನಾಡಿ, ಕೆಪಿಸಿಸಿ ರಾಜ್ಯ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ರಂಗಸ್ವಾಮಿ ಅವರ ಸೂಚನೆ ಮೇರೆಗೆ ನಾವು ಮೈಸೂರಿನಾದ್ಯಂತ ಸಮರೋಪಾದಿಯಲ್ಲಿ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ಕೈಗೊಂಡಿದ್ದೇವೆ


ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ಮತಗಳ್ಳತನ ನಡೆಸುವ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಾದ ರಾಹುಲ್ ಗಾಂಧಿ ಅವರು ಅನೇಕ ಕ್ಷೇತ್ರಗಳ ಪ್ರಾತ್ಯಕ್ಷಿಕೆ ಮೂಲಕ ಇದನ್ನು ಸಾಬೀತುಪಡಿಸಿದ್ದಾರೆ.

ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ 2004ರಲ್ಲಿ ಇವಿಎಂ ಮತಯಂತ್ರ ವ್ಯವಸ್ಥೆ ಅಳವಡಿಸಿಕೊಳ್ಳಲಾಯಿತು. ಆದರೇ ಚುನಾವಣಾ ಆಯೋಗ ಪಾರದರ್ಶಕವಾಗಿ ಚುನಾವಣೆಯನ್ನು ನಡೆಸುತ್ತಿಲ್ಲ ಎಂದು ನಮ್ಮ ನಾಯಕರು ವಿವಿಧ ಕ್ಷೇತ್ರಗಳಲ್ಲಿ ನಡೆದಿರುವ ಅಕ್ರಮಗಳನ್ನು ತೋರಿಸುವ ಮೂಲಕ ಮತಗಳ್ಳತನ ನಡೆದಿರುವುದಕ್ಕೆ ಸಾಕ್ಷಿ ಸಮೇತ ಬಹಿರಂಗ ಮಾಡಿದ್ದಾರೆ. ಒಬ್ಬರು 20 ಮತಗಟ್ಟೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಮತ ನೋಂದಣಿ ಮಾಡಿಕೊಂಡಿರುವುದು ಜಗಜ್ಜಾಹೀರಾಗಿದೆ. ಹರಿಯಾಣ ರಾಜ್ಯದ ಚುನಾವಣೆಯಲ್ಲಿ 25 ಲಕ್ಷ ಮತ ಕಳ್ಳತನ ನಡೆದಿದೆ, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಲವು ಕಡೆ ಮತ ಕಳ್ಳತನ ಮಾಡಿರುವ ಬಗ್ಗೆ ರಾಹುಲ್ ಗಾಂಧಿ ಅವರು ಪ್ರಾತ್ಯಕ್ಷಿಕೆ ಮೂಲಕ ಸಾಬೀತುಪಡಿಸಿದ್ದಾರೆ' ಇದನ್ನು ತಡೆಗಟ್ಟಿ ಪಾರದರ್ಶಕ ಚುನಾವಣೆಯನ್ನು ನಡೆಸಿ ಎಂದು ಸಹಿ ಸಂಗ್ರಹಿಸುವ ಮೂಲಕ ಒತ್ತಾಯ ಮಾಡುತ್ತಿದ್ದೇವೆ. ನಾವು ಮೈಸೂರಿನ ಎನ್‍ಆರ್ ಮೊಹಲ್ಲ, ಶಿವಾಜಿ ರಸ್ತೆ ಸೇರಿದಂತೆ ಸಯ್ಯಾಜಿರಾವ್ ರಸ್ತೆಯಲ್ಲಿ ಇಂದು 3 ಸಾವಿರ ಸಹಿಗಳನ್ನು ಸಂಗ್ರಹಿಸಿ ಕೆಪಿಸಿಸಿ ಕಚೇರಿಗೆ ರವಾನಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮೈಸೂರು ನಗರ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಸಾದಿಖ್ ಖಾನ್, ಜುನೇದ್ ಖಾನ್, ನಾಹೀದ್ ಷರೀಫ್, ಜವಾದ್ ಖಾನ್, ಅನಿಲ್ ಕುಮಾರ್, ಚಾಂದ್ ಪಾಷ, ರಫೀಖ್ ಅಹಮದ್, ರೋಷನ್, ಅಲೀಮ್, ಅಯಾಸ್ ಮತ್ತಿತರರು ಇದ್ದರು.