ಮೈಸೂರು: ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಹಿರಿಯ ನಾಗರಿಕರ ಅನುಕೂಲಕ್ಕಾಗಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ವಿವಿಧ ಆಸ್ಪತ್ರೆಗಳು, ಶಾಲಾ ಕಾಲೇಜುಗಳಿಗೆ ಸಂಪರ್ಕ ಕಲ್ಪಿಸುವ ನೂತನ ನಗರ ಸಾರಿಗೆ ಬಸ್ ಸಂಚಾರಕ್ಕೆ ಶಾಸಕರಾದ ತನ್ವೀರ್ ಸೇಠ್ ಅವರು ಚಾಲನೆ ನೀಡಿದರು.
ಸೋಮವಾರ ಬೆಳಗ್ಗೆ ರಾಜೀವ್ ನಗರದ ಅಲ್ ಬದರ್ ವೃತ್ತದಲ್ಲಿ ಈ ನೂತನ ಸಾರಿಗೆ ಸಂಚಾರಕ್ಕೆ ಅವರು ಚಾಲನೆ ನೀಡಿ ಮಾತನಾಡಿ, ನಗರ ಪ್ರದೇಶಗಳು ಬೆಳೆಯುತ್ತಿವೆ. ಎನ್.ಆರ್. ಕ್ಷೇತ್ರದ ರಸ್ತೆಗಳನ್ನು ಅಗಲೀಕರಣ ಮಾಡಿದ ನಂತರ ಈ ಭಾಗದ ವಿದ್ಯಾರ್ಥಿಗಳು, ಉದ್ಯೋಗಸ್ತ ಮಹಿಳೆಯರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಶಾಲಾ ಕಾಲೇಜುಗಳು, ವಿವಿಧ ಆಸ್ಪತ್ರೆಗಳು ಮತ್ತು ನಗರದ ಕೇಂದ್ರ ಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಒಂದು ವಿಶೇಷ ಮಾರ್ಗವನ್ನು ಸಿದ್ದಡಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅವರು ನಮ್ಮ ಮನವಿಗೆ ಸ್ಪಂದಿಸಿ ಹೊಸ ಮಾರ್ಗಕ್ಕೆ ನಾಲ್ಕು ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮಾರ್ಗವು ವಿವಿಧ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸುವ ವಿಶೇಷ ಮಾರ್ಗವಾಗಿದೆ. ಇದರಿಂದ ಈ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಇದರ ಯಶಸ್ಸಿನಲ್ಲಿ ಸಾರಿಗೆ ಅಧಿಕಾರಿಗಳ ಪಾತ್ರವೂ ದೊಡ್ಡದು. ಸಂಸ್ಥೆಗೆ ಆದಾಯವೂ ಹೆಚ್ಚಾಗಿದೆ. ಈ ಯೋಜನೆಯ ಅನುಕೂಲ ಎನ್‌ಆರ್ ಕ್ಷೇತ್ರದ ಮಹಿಳೆಯರಿಗೂ ಸಿಗಲಿ ಎಂದು ಈ ಹೊಸ ೪ ಮಾರ್ಗಗಳನು ಸೃಜಿಸಲಾಗಿದೆ.
ಈ ಬಸ್‌ಗಳು ನಗರ ಬಸ್ ನಿಲ್ದಾಣದಿಂದ ವಿವಿಧ ಆಸ್ಪತ್ರೆಗಳು, ರಿಂಗ್ ರಸ್ತೆ, ಜಿಲ್ಲಾ ಆಸ್ಪತ್ರೆ, ಜಯದೇವ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ, ಬಾಲಭವನ, ಸಂತ ಫಿಲೋಮಿನಾ ಕಾಲೇಜು, ರಾಜೀವ ನಗರ, ಸಾತಗಳ್ಳಿ, ಟೆರಿಷಿಯನ್ ಕಾಲೇಜು, ಜಿಲ್ಲಾಧಿಕಾರಿಗಳ ಕಚೇರಿ, ರೈಲ್ವೆ ನಿಲ್ದಾಣ, ಮಣಿಪಾಲ್ ಆಸ್ಪತ್ರೆ, ಕಾವೇರಿ ಆಸ್ಪತ್ರೆ, ನಾರಾಯಣ ಹೃದಯಾಲಯ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳು ಇತರೆ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್, ಡಿಟಿಒ ಕಲಾಶ್ರೀ, ಸಾರಿಗೆ ಸಂಸ್ಥೆಯ ಇತರೆ ಅಧಿಕಾರಿಗಳಾದ ಜಯಕುಮಾರ್, ಶಿಪ್ರಸಾದ್, ಚಂದ್ರಮೌಳಿ, ವಸಂತ್, ಅಲೀಮುಲ್ಲಾ ಖಾನ್, ರಮೇಶ್, ಶಿವಪ್ರಕಾಶ್, ಎಂ.ಶೌಕತ್, ಕಾಂಗ್ರೆಸ್ ಮುಖಂಡರಾದ ಸೈಯದ್ ಇಕ್ಬಾಲ್, ಶೌಕತ್ ಅಲೀಖಾನ್, ಮುನ್ನ ಇತರರು ಇದ್ದರು.


