ವರದಿ : ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ಆಟೋ ಚಾಲಕರು ಮತ್ತು ಹೆಚ್.ವಿ.ರಾಜೀವ್ ಸ್ನೇಹ ಬಳಗದಿಂದ ವಿದ್ಯಾರಣ್ಯಪುರಂ ಭೂತಾಳೆ ಮೈದಾನದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಜರುಗಿತು.
ಕನ್ನಡ ಬಾವುಟವನ್ನು ಹೊತ್ತ ನೂರಾರು ಆಟೋಗಳು ಮೈದಾನದ ಸುತ್ತ ನಿಂತಿದ್ದು, ಕನ್ನಡ ಕಂಪನ್ನು ಪಸರಿಸಿದವು, ಕನ್ನಡ ನೆಲ, ಜಲ, ಭಾಷೆಯ ಪ್ರಾಮುಖ್ಯತೆ ಕುರಿತ ಹಾಡುಗಳು ಕಾರ್ಯಕ್ರಮದ ಉದ್ದಕ್ಕೂ ಕೇಳಿ ಬಂದವು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಆಟೋ ಚಾಲಕರು ಕಾಯಕ ಯೋಗಿಗಳು, ತಮ್ಮ ದೈನಂದಿನ ಪ್ರಾಮಾಣಿಕ ಕರ್ತವ್ಯದ ಮೂಲಕ ತಮ್ಮ ಬದುಕು ನಡೆಸುತ್ತಿದ್ದಾರೆ. ಇಂತಹ ದುಡಿಯುವ ವರ್ಗದ ಜತೆ ನಾವು ಇದ್ದೇವೆ. ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ಹಲವು ಸವಲತ್ತುಗಳನ್ನು ನೀಡಿದೆ. ಆಟೋ ಚಾಲಕರು ಈ ಸವಲತ್ತುಗಳನ್ನು ಪಡೆಯಬೇಕಾದರೆ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾವು ಭರಿಸುವುದಾಗಿ ಹೇಳಿದರು.
ಆಟೋ ಚಾಲಕರ ಸಂಘದ ಲಕ್ಷ್ಮೀನಾರಾಯಣ್ ಮಾತನಾಡಿ, ಆಟೋ ಚಾಲಕರ ಬದುಕಿಗೆ ಬೈಕ್ ಟ್ಯಾಕ್ಸಿ ಸೇವೆಗಳು ಕಂಟಕವಾಗಿವೆ, ಅಲ್ಲದೇ ಸಾರಿಗೆ ಇಲಾಖೆ ಕೂಡ ಹೊಸ ಹೊಸ ಆಟೋಗಳಿಗೆ ಪರ್ಮಿಟ್ ನೀಡುತ್ತಿದೆ. ಇದರಿಂದ ಅಗತ್ಯಕ್ಕಿಂತ ಹೆಚ್ಚು ಆಟೋಗಳು ರಸ್ತೆಗಿಳಿದ ಪರಿಣಾಮ ಇದನ್ನೆ ನಂಬಿ ಬದುಕು ನಡೆಸುತ್ತಿರುವ ನಮ್ಮಂತಹ ಬಡ ಆಟೋ ಚಾಲಕರು ಜೀವನ ನಡೆಸುವುದು ಕಷ್ಟವಾಗಿದೆ. ಸಾರಿಗೆ ಇಲಾಕೆ ಇದನ್ನು ನಿಯಂತ್ರಿಸಬೇಕು ಎಂದು ಕೋರಿದರು.
ಆಟೋ ಚಾಲಕರ ಸಂಘದ ಮತ್ತೊಬ್ಬ ಪದಾಧಿಕಾರಿ ಸಾಯಿಬಾಬ ನಾಗರಾಜು ಮಾತನಾಡಿ, ಆಟೋ ಚಾಲಕರು ಸಂಘಟಿತರಾದರೆ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು, ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆಯಬಹುದು, ಇದರಿಂದ ನಾವು ಸಂಘಟಿತರಾಗುವುದು ಮುಖ್ಯ ಎಂದರು.
ಜಂಟಿ ಸಾರಿಗೆ ಆಯುಕ್ತ ವಸಂತ ಈಶ್ವರ ಚವ್ಹಾಣ್ ಮಾತನಾಡಿ, ಬೆಂಗಳೂರು ಮತ್ತು ಧಾರಾವಾಡ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಪರ್ಮಿಟ್ ನೀಡಬೇಕೆಂದು ಸರ್ಕಾರ ಆದೇಶಿಸಿದೆ, ಅಲ್ಲದೇ ಬೈಕ್ ಟ್ಯಾಕ್ಸಿ ಪ್ರಕಟಣ ನ್ಯಾಯಾಲಯದಲ್ಲಿದೆ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಆಟೋ ಚಾಲಕರಿಗೆ ಸಿಗುವ ಎಲ್ಲ ಸವಲತ್ತುಗಳನ್ನು ಪಡೆಯಲು ಮೊದಲು ನೋಂದಣಿ ಮಾಡಿಕೊಳ್ಳಬೇಕು ಇದರಿಂದ ಎಲ್ಲ ಸವಲತ್ತುಗಳನ್ನು ಪಡೆಯಲು ಅರ್ಹತೆ ಹೊಂದುವಿರಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ನಗರ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಮೂರ್ತಿ ಉದ್ಘಾಟಿಸಿ ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಕನ್ನಡ ನೆಲ, ಜಲ, ಭಾಷೆಯ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಪತ್ರವನ್ನು ಹಲವಾರು ಆಟೋ ಚಾಲಕರಿಗೆ ವಿತರಣೆ ಮಾಡಲಾಯಿತು.
ದೊಡ್ಡ ದೇವಪ್ಪ ಸ್ವಾಗತಿಸಿದರೆ, ಪಲ್ಲವಿ ನಿರೂಪಣೆ ಮಾಡಿದರು. ಕಾರ್ಯಕ್ರಮದ ಬಳಿಕ ಉಪಹಾರ ವ್ಯವಸ್ಥೆ ಮಾಡಲಾಗಿತ್ತು, ಬಳಿಕ ಆಟೋ ಚಾಲಕರು ಮೆರವಣಿಗೆ ನಡೆಸಿದರು.




