ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ನಗರದ ಸಂತ ಫಿಲೋಮಿನಾ ಚರ್ಚ್ ಆವರಣದಲ್ಲಿರುವ ಸೆಂಟ್ ಮೇರಿಸ್ ಶಾಲೆಯಲ್ಲಿ ಗುರುವಾರ ನಡೆದ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ
ಕೇಂದ್ರಕ್ಕೆ ಶಾಸಕ ತನ್ವೀರ್ ಸೇಠ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಿಕ್ಷಣ ಇಲಾಖೆಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ನಡೆದಿದೆ. ಈ ಶಿಬಿರ ತುಂಬಾ ಅಚ್ಚುಕಟ್ಟಾಗಿ ಹೃದಯಸ್ಪರ್ಶಿಯಾಗಿ ನಡೆದಿದ್ದು, ಎನ್‌ಆರ್ ಕ್ಷೇತ್ರದಲ್ಲಿ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ೭೦೬ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಿ ಅವರಿಗೆ ನಿಗದಿತ ಪ್ರಮಾಣ ಪತ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತತಕ್ಷಣಾ ವೈದ್ಯಕೀಯ ಸೌಲಭ್ಯಗಳು, ಸಲಕರಣೆಗಳನ್ನು ಒದಗಿಸಬೇಕೆಂದು ನಾನು ಇಲಾಖೆಗೆ ಒತ್ತಾಯ ಮಾಡುತ್ತೇನೆ, ಸಂಘ ಸಂಸ್ಥೆಗಳೂ ಸಹ ಈ ಮಕ್ಕಳ ಸಹಾಯಕ್ಕೆ ಮುಂದಾಗಬೇಕು, ಕೆಲವು ಮಕ್ಕಳಿಗೆ ಅಂಗವಿಕಲತೆ ಇಲ್ಲ ಎಂದು ವೈದ್ಯರು ಪ್ರಮಾಣ ಪತ್ರ ನೀಡಿದ್ದರಿಂದ ಅವರಿಗೆ ಸರ್ಕಾರಿ ಸೌಲಭ್ಯ ಪಡೆಯಲು ಅನಾನುಕೂಲವಾಗಿದೆ. ಈ ನಿಟ್ಟಿನಲ್ಲಿ ವೈದ್ಯರು ಇಂತಹ ಮಕ್ಕಳಿಗೆ ಮಾನವೀಯತೆ ದೃಷ್ಟಿಯಿಂದ ಸರ್ಕಾರಿ ಸೌಲಭ್ಯ ಪಡೆಯಲು ನಿಗದಿತ ಪ್ರಮಾಣಪತ್ರ ಒದಗಿಸಬೇಕು ಎಂದರು.
ಶಾಲೆಗಳಲ್ಲಿ ವ್ಯಾಸಂಗ ಮಾಡದ ಮನೆಯಲ್ಲೇ ಇರುವ ವಿಶೇಷ ಚೇತನ ಮಕ್ಕಳಿಗೆ ಗುರುತಿಸುವಂತೆ ಮೈಸೂರು ನಗರ ಬೀದಿ ಕಾರ್ಮಿಕರ ಸಂಘದ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಪಟ್ಟಿ ತಯಾರಿಸುವಂತೆ ಸೂಚನೆ ನೀಡಲಾಗಿದೆ. ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣೆ ನಡೆದ ಬಳಿದ ಸಂಘ ಸಂಸ್ಥಗಳ ಸಹಾಯದೊಂದಿಗೆ ಇಂತಹ ಮಕ್ಕಳಿಗೆ ನೀಡಬೇಕಾದ ತರಬೇತಿ, ಅಗತ್ಯ ಸಲಕರಣೆಗಳ ಒದಗಿಸುವಿಕೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಈ ವೇಳೆ ಸ್ಥಳೀಯ ಮುಖಂಡರು ಶಾಸಕ ತನ್ವೀರ್ ಸೇಠ್ ಮತ್ತು ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್, ಮೈಸೂರು ನಗರ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಮೊಹಮ್ಮದ್ ಶಿಫ್ಟನ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶೌಕತ್ ಪಾಷ, ಮುಖಂಡರಾದ ಅಫ್ರೋಜ್ ಖಾನ್(ಮುನ್ನಾ), ಮಝರ್ ಇತರರು ಇದ್ದರು.



