ವರದಿ: ನಿಷ್ಕಲ ಎಸ್.ಗೌಡ
ಮೈಸೂರು : ಇತ್ತೀಚೆಗೆ ನಗರದ ಹೃದಯ ಭಾಗದಲ್ಲಿರುವ ವಸ್ತು ಪ್ರದರ್ಶನ ಪ್ರಾಧಿಕಾರದ ಬಳಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾದ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕನ್ನಡಾಂಬೆ ರಕ್ಷಣಾ ವೇದಿಕೆ ಕಾರ್ಯಕರ್ತರು, ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಲ್ಲಬೇಕು, ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಪ್ರಕರಣವನ್ನು ಎಳೆಯಬಾರದು, ಮೂರು ತಿಂಗಳೊಳಗೆ ಪ್ರಕರಣದ ತನಿಖೆಯನ್ನು ಮುಗಿಸಿ ಆರೋಪಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ಆಗ್ರಹಿಸಿದರು.
ದಸರಾ ಸಂದರ್ಭದಲ್ಲಿ ಜೀವನ ನಿರ್ವಹಣೆಗೆ ದೂರದ ಊರುಗಳಿಂದ ಬಡವರು ವ್ಯಾಪಾರ ಮಾಡಿಕೊಂಡು ಬದುಕಲು ಮೈಸೂರಿಗೆ ಆಗಮಿಸುತ್ತಾರೆ. ಇಂತಹವರಿಗೆ ತಂಗಲು ಮೈಸೂರು ಮಹಾನಗರ ಪಾಲಿಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ದಸರಾಕ್ಕೂ ಮುನ್ನ ಪೊಲೀಸರು ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳ ಮೇಲೆ ಸೂಕ್ತ ನಿಗಾ ಇಡಬೇಕು. ಅಲ್ಲದೇ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಮಾತನಾಡಿ, ಎರಡು ದಿನಗಳಲ್ಲಿ ಒಂದೇ ಸ್ಥಳದಲ್ಲಿ ಎರಡು ಕೊಲೆಯಾಗಿದೆ. ಅಮಾಯಕ ಹೆಣ್ಣು ಮಗಳ ಮೇಲೆ ಮೃಗೀಯವಾಗಿ ಎರಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಮೈಸೂರು ನಗರವನ್ನು ಬೆಚ್ಚಿ ಬೀಳಿಸಿದೆ, ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆಯುವ ಬದಲು ತಲೆಗೆ ಹೊಡೆದಿದ್ದರೆ ಚೆನ್ನಾಗಿತ್ತು, ಆರೋಪಿಯ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಇದೇ ವೇಳೆ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ ಡಿಪಿಕೆ ಪರಮೇಶ್, ಮೈಸೂರು ಜಿಲ್ಲಾ ಅಧ್ಯಕ್ಷ ಸಂತೋಷ್, ರಾಜ್ಯ ಖಜಾಮಚಿ ನಂಜುಂಡ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಂಜುಳ, ಮೈಸೂರು ಜಿಲ್ಲಾ ಗೌರವಾಧ್ಯಕ್ಷರಾದ ಮನುಗೌಡ, ಹೊನ್ನೇಗೌಡ, ಮಹದೇವಸ್ವಾಮಿ, ಹರೀಶ, ಕಿರಣ್, ಗೌತಮ್, ನೇಹಾ, ಸುನೀಲ್, ಸಿದ್ದೇಗೌಡ, ಮಂಜು ಪುಣಜೂರು, ಸಿಂಧುವಳ್ಳಿ ಶಿವಕುಮಾರ್, ಇ.ವಿ.ನಾಗರಾಜು, ಲೋಕೇಶ್, ರವಿಗೌಡ, ನಾಗರಾಜು, ಲೂಸಿಯಾ, ಜೈನ್, ಅಂಬಿಕಾ, ಸುಧಾ, ಸಿದ್ದೇಗೌಡ, ಬೆಟ್ಟೇಗೌಡ, ಚನ್ನಪ್ಪ, ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮೈಸೂರಿನಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಉತ್ತಮವಾಗಿದೆ. ಆದರೇ, ಒಂದೇ ಸ್ಥಳದಲ್ಲಿ ಎರಡು ಕೊಲೆಗಳು ನಡೆದಿವೆ, ಅಲ್ಲದೇ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಜನರ ಮನಸ್ಸನ್ನು ಘಾಸಿಗೊಳಿಸಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು, ಪೊಲೀಸರು ಕ್ರಿಮಿನಲ್‌ಗಳ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು.
ಬಿ.ಬಿ.ರಾಜಶೇಖರ್, ರಾಜ್ಯಾಧ್ಯಕ್ಷರು.