ಮೈಸೂರು : ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹರಡುತ್ತಿರುವ ಪೈಲ್ಸ್, ಫಿಷರ್, ಪಿಸ್ತುಲಾ ರೋಗದ ಬಗ್ಗೆ ಸಾರ್ವಜನಿಕರು, ರೋಗಿಗಳು ಉದಾಸೀನ ಮಾಡದೆ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಅದು ಪ್ರಾಣಕ್ಕೆ ಅಪಾಯ ಒಡ್ಡುವ ಕ್ಯಾನ್ಸರ್ ರೋಗಕ್ಕೆ ತಿರುಗಬಹುದು ಎಂದು ಬೆಂಗಳೂರಿನ ಸ್ಮೈಲ್ ಇನ್ಸ್‍ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರೋಲಜಿ ಸಿಇಓ ಡಾ.ಸಿ.ಎಂ.ಪರಮೇಶ್ವರ್ ಹೇಳಿದರು.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜನ ಸಾಮಾನ್ಯರು ಪೈಲ್ಸ್, ಫಿಷರ್, ಪಿಸ್ತುಲಾ ಅಂದರೆ ಉದಾಸೀನ ಮಾಡುತ್ತಾರೆ, ಸಾಕಷ್ಟು ಜನರು, ವಿಶೇಷವಾಗಿ ಮಹಿಳೆಯರು ಇದನ್ನು ಹೇಳಿಕೊಳ್ಳಲು ಸಂಕೋಚ ಪಡುತ್ತಾರೆ. ಯಾವುದೇ ಕಾರಣಕ್ಕೂ ಸಂಕೋಚ ಪಡದೆ, ಉತ್ತಮ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ನಿಧಾನವಾದರೆ ಇದು ಪ್ರಾಣಕ್ಕೆ ಅಪಾಯ ಎಂದು ಎಚ್ಚರಿಕೆ ನೀಡಿದರು.
ಗುದದ್ವಾರದಲ್ಲಿನ ರಕ್ತಸ್ರಾವ : ಗುದದ್ವಾರದಲ್ಲಿ ರಕ್ತ ಹೋಗುತ್ತಿದ್ದರೆ ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು. ಅದು ಕೋಲನ್ ಕ್ಯಾನ್ಸರ್ ಆಗಿರಬಹುದು. ಅಥವಾ ರೆಕ್ಟಲ್ ಕ್ಯಾನ್ಸರ್ ಆಗಿರಬಹುದು. ಈ ಎರಡು ಕ್ಯಾನ್ಸರ್ ನಮ್ಮ ದೇಶದಲ್ಲಿ ಹೆಚ್ಚಾಗಿದೆ. ನಾವು ತಿನ್ನುವ ಆಹಾರಗಳು, ಜೀವನ ಕ್ರಮದಿಂದ ಈ ಕಾಯಿಲೆಗಳು ಬರುತ್ತಿವೆ.
ಕೊಲೊರೆಕ್ಟಲ್ ಕ್ಯಾನ್ಸರ್ ಭಾರತದಲ್ಲಿ ಹೆಚ್ಚಾಗುತ್ತಾ ಬಂದಿದೆ. ಅಮೇರಿಕಾ ದೇಶದಲ್ಲಿ 2030ರ ಹೊತ್ತಿಗೆ ಶೇಕಡಾ 30% ರಷ್ಟು ಈ ಖಾಯಿಲೆ ಹೆಚ್ಚಾಗುತ್ತದೆ. ಭಾರತದಲ್ಲೂ ಮುಂದಿನ 30 ವರ್ಷಗಳ ನಂತರ ಇದೆ ರೀತಿಯ ಸಮಸ್ಯೆಯನ್ನು ನಾವು ನೋಡುತ್ತೇವೆ ಎಂದು ಡಾ.ಸಿ.ಎಂ.ಪರಮೇಶ್ವರ ಎಚ್ಚರಿಕೆ ನೀಡಿದರು.
ಮುಂದಿನ 10 ವರ್ಷದಲ್ಲಿ ಯಾರೂ ಸಹ ಕೋಲೋನ್ ಕ್ಯಾನ್ಸರ್‍ನಿಂದ ಜೀವ ಕಳೆದುಕೊಳ್ಳಬಾರದು. ಮತ್ತು ಮುಂದಿನ 10 ವರ್ಷದೊಳಗೆ ಭಾರತದಲ್ಲಿರುವ ನಕಲಿ ವೈದ್ಯರನ್ನ ತೆಗೆದುಹಾಕಬೇಕು. ಇವರು ಮುಂದುವರಿದರೆ ಜನರ ಪ್ರಾಣಕ್ಕೆ ಗಂಡಾಂತರ ತಪ್ಪಿದಲ್ಲ ಎಂದರು.
ಪೈಲ್ಸ್ ರೋಗಕ್ಕೆ ರಾಷ್ಟ್ರೀಯ ಕಾರ್ಯಕ್ರಮ ಅಗತ್ಯ
ದಂತ, ದೃಷ್ಟಿಹೀನತೆ, ಕ್ಯಾನ್ಸರ್, ಲೆಪ್ರಸಿ, ಕ್ಷಯ, ಮುಂತಾದ ಖಾಯಿಲೆಗಳಿಗೆ ರಾಷ್ಟ್ರೀಯ ಕಾರ್ಯಕ್ರಮ ಇದೆ, ಆದರೆ, ಭಾರತದಲ್ಲಿ ಸುಮಾರು ಶೇ.36 ಜನರಿಗೆ ಹರಡಿರುವ ಪೈಲ್ಸ್, ಫಿಷರ್, ಪಿಸ್ತುಲಾ ಖಾಯಿಲೆಗಳಿಗೆ ರಾಷ್ಟ್ರೀಯ ಕಾರ್ಯಕ್ರಮ ಇಲ್ಲ. ಈ ಪೈಕಿ ಶೇ.19 ರೋಗಿಗಳನ್ನು ಸೂಕ್ಷ್ಮವಾಗಿ ಕೋಲೊನ್‍ನಲ್ಲಿ ನೋಡಿದಾಗ ಅದು ಅಲ್ಸರೇಟಿವ್ ಕೊಲೈಟಿಸ್ ಆಗಿರಬಹುದು, ಕ್ರೋನ್ಸ್ ಕಾಯಿಲೆ ಅಥವಾ ಕ್ಯಾನ್ಸರ್ ಆಗಿರುವ ಸಾಧ್ಯತೆ ಇದೆ. ಒಬ್ಬ ಮನುಷ್ಯ ಪೈಲ್ಸ್‍ನಿಂದ ರಕ್ತಸ್ರಾವ ಅಂತ ಬರುತ್ತಾನೆ ಅದು ಕೆಲವೊಮ್ಮೆ ಪೈಲ್ಸ್ ಆಗಿರಲು ಸಾಧ್ಯವಿಲ್ಲ ಅದು ಕ್ಯಾನ್ಸರ್ ಕೂಡ ಆಗಿರಬಹುದು. ಹಾಗಾಗಿ ಪೈಲ್ಸ್, ಫಿಷರ್, ಪಿಸ್ತುಲಾ ಬಗ್ಗೆ ಸರ್ಕಾರ ವಿಶೇಷವಾಗಿ ಗಮನಿಸಿ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಬೇಕು.
• ಡಾ.ಸಿ.ಎಂ.ಪರಮೇಶ್ವರ, ಗ್ಯಾಸ್ಟ್ರೋಎಂಟರೋಲಜಿಸ್ಟ್
ಭಾರತದಲ್ಲಿ 15 ಲಕ್ಷ ನಕಲಿ ವೈದ್ಯರು
ಭಾರತದಲ್ಲಿ ಸುಮಾರು 15 ಲಕ್ಷ ನಕಲಿ ವೈದ್ಯರಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೆ ಇವರು ಆಮಿಷ ಒಡ್ಡಿ ಕ್ಲೀನಿಕ್ ತೆರೆದು ಪೈಲ್ಸ್, ಫಿಷರ್, ಪಿಸ್ತುಲಾ ರೋಗಕ್ಕೆ ನಾಟಿ ಔಷದಿ ನೀಡುತ್ತೇವೆ ಎಂದು ಜಾಹಿರಾತು ನೀಡಿ, ಜನರಿಂದ ಹಣ ಸುಲಿಗೆ ಮಾಡುತ್ತಾರೆ. ಇವರನ್ನು ತೊಲಗಿಸಿ ಜನರ ಪ್ರಾಣ ಉಳಿಸಬೇಕಿದೆ. ಇದಕ್ಕಾಗಿ ನಾವು ದೇಶಾದ್ಯಂತ ಜಾಗೃತಿ ಮೂಡಿಸುತ್ತಿದ್ದೇವೆ.
ಸಿರಿಧಾನ್ಯಗಳ ಬಳಕೆ ಅಗತ್ಯ
ಪೈಲ್ಸ್, ಫಿಷರ್, ಪಿಸ್ತೂಲ ರೋಗವನ್ನು ದೂರವಿಡಲು ನಾವು ನಮ್ಮ ಆಹಾರವನ್ನು ಸಿರಿದಾನ್ಯಗಳಿಗೆ ಪರಿವರ್ತಿಸಿಕೊಳ್ಳಬೇಕು. ಹಸಿರು ತರಕಾರಿ, ಸೊಪ್ಪು, ಶುದ್ಧವಾದ ನೀರು, ಸೇವಿಸುವುದು ಬಹು ಮುಖ್ಯ.
ದೇಶದಲ್ಲಿ ಶೇ.36 ಜನರಿಗೆ ಪೈಲ್ಸ್
ಭಾರತದಲ್ಲಿ ಶೇ.36 ಜನರಿಗೆ ಪೈಲ್ಸ್ ಇದೆ, ಶೇ.15 ಜನರಿಗೆ ಕಾನ್ಸೆಪೇಷನ್ ಇದೆ, ಶೇ.10 ರಷ್ಟು ಜನರಿಗೆ ಫಿಸ್ಟುಲ ಇದೆ. ಫಿಸ್ಟುಲ ಶೇ.90 ಬ್ಯಾಕ್ಟಿರಿಯಾದಿಂದ ಬರುತ್ತೆ. ಇನ್ನು ಶೇ. 10 ರಷ್ಟು ಜನರಿಗೆ ಕ್ಯಾನ್ಸರ್, ಟಿಬಿ, ಅಲ್ಸರೇಟೀವ್ ಕೊಲೈಟಿಸ್, ಕ್ರೋನ್ಸ್ ಡಿಸೀಸ್ ಇರುವ ಸಾಧ್ಯತೆ ಇದೆ.

