ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‍ಎಸ್ ಎಎಚ್‍ಇಆರ್) ಮಾರಿಷಸ್‍ನಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸುತ್ತಿದ್ದು, ಅಂತಾರಾಷ್ಟ್ರೀಯ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.ಈ ಕುರಿತು ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹ ಕುಲಪತಿ ಬಿ.ಸುರೇಶ್, ಮಾರಿಷಸ್‍ನಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಲು ಅಲ್ಲಿನ ಸರ್ಕಾರದ ಉನ್ನತ ಶಿಕ್ಷಣ ಆಯೋಗದಿಂದ ಅನುಮೋದನೆ ಸಿಕ್ಕಿದೆ. ಜೆಎಸ್‍ಎಸ್ ಸ್ಕೂಲ್ ಆಫ್ ಮೆಡಿಸಿನ್ ಸ್ಥಾಪನೆಗೆ ಅನುಮೋದನೆ ದೊರೆತಿದ್ದು, ಪ್ರಸಕ್ತವರ್ಷದಲ್ಲೇ ವಿದ್ಯಾರ್ಥಿಗಳ ಪ್ರವೇಶ ಪ್ರಾರಂಭಿಸಲಾಗುತ್ತಿದೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ದಿವ್ಯಸಂಕಲ್ಪ ಹಾಗೂ ದೂರದೃಷ್ಟಿಯ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಅಧಿಕೃತ ಅಂಗೀಕಾರದೊಂದಿಗೆ, ಜೆಎಸ್‍ಎಸ್ ಮಹಾವಿದ್ಯಾಪೀಠ ಅಂತರಾಷ್ಟ್ರೀಯ ವೈದ್ಯಕೀಯ ಶಿಕ್ಷಣದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
100 ಸೀಟುಗಳ ಪ್ರವೇಶಕ್ಕೆ ಅಲ್ಲಿನ ಸರ್ಕಾರದಿಂದ ಅನುಮತಿ ದೊರೆತಿದೆ. ಇದೇ ನವೆಂಬರ್‍ನಲ್ಲಿ ಕೋರ್ಸ್ ಆರಂಭಿಸಲಾಗುವುದು. ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಅರ್ಹತೆ ಇರುವವರು ಪ್ರವೇಶ ಪಡೆಯಬಹುದು. ಬೇರೆ ದೇಶದ ವಿದ್ಯಾರ್ಥಿಗಳು ಅಲ್ಲಿನ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಎನ್‍ಎಂಸಿ (ನ್ಯಾಷನಲ್ ಮೆಡಿಕಲ್ ಕೌನ್ಸಿಲ್) ಮಾರ್ಗಸೂಚಿಯಂತೆ ಕೋರ್ಸ್ ನಡೆಸಲಾಗುವುದು. ಭಾರತೀಯ ಪಠ್ಯಕ್ರಮದಲ್ಲೇ ಬೋಧಿಸಲಾಗುವುದು. ಬೋಧಕರಲ್ಲಿ ಬಹುತೇಕರು ನಮ್ಮ ದೇಶದವರೇ ಇರುತ್ತಾರೆ. ಅಲ್ಲದೆ, ಕ್ಲಿನಿಕಲ್ ತರಬೇತಿಯನ್ನೂ ಕೊಡಲಾಗುವುದು. ಇದಕ್ಕೆ ಬೇಕಾದ ಸೌಕರ್ಯ, ಅತ್ಯಾಧುನಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜತೆಗೆ, ಎಫ್‍ಎಂಜಿ (ಫಾರಿನ್ ಮೆಡಿಕಲ್ ಗ್ರಾಜುಯೇಟ್) ಪರೀಕ್ಷೆಗೆ ಬೇಕಾಗುವ ತರಬೇತಿಯನ್ನೂ ನೀಡಲಾಗುವುದು. ಅಲ್ಲಿನ ಆರೋಗ್ಯ ಇಲಾಖೆ ಎಸ್‍ಎಸ್‍ಆರ್‍ನ್ ಎಂಬಿಬಿಎಸ್ ಕೋರ್ಸ್ ಆರಂಭ ಆಸ್ಪತ್ರೆ, ಐದು ಪ್ರಾದೇಶಿಕ ಆಸ್ಪತ್ರೆಗಳು ಮತ್ತು ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 600 ಹಾಸಿಗೆಗಳ ಸೌಲಭ್ಯವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಕ್ಲಿನಿಕಲ್ ತರಬೇತಿಗೆ ಒದಗಿಸಿದೆ ಎಂದರು.
ಭಾರತದಿಂದ ವಿದ್ಯಾರ್ಥಿಗಳು ಹೊರ ದೇಶಗಳಿಗೆ ಎಂಬಿಬಿಎಸ್‍ಗಾಗಿ ತೆರಳುವುದು ಹಾಗೂ ಕೊರೊನಾ, ಯುದ್ಧದ ವೇಳೆ ಅಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಲಾಗದೇ ವಾಪಸಾಗುವುದು ಗಮನಕ್ಕೆ ಬಂತು. ಹೀಗಾಗಿ ಮಾರಿಷಸ್ ಸರ್ಕಾರದ ಅನುಮೋದನೆಯೊಡನೆ ಸಂಸ್ಥೆಯ ಸುಸಜ್ಜಿತ ಕಟ್ಟಡ ಹಾಗೂ ಸೌಲಭ್ಯದಲ್ಲಿ ಎಂಬಿಬಿಎಸ್ ಶಿಕ್ಷಣ ಪ್ರಾರಂಭಿಸಲಾಗುತ್ತಿದೆ. ಭಾರತದ ವಿದ್ಯಾರ್ಥಿಗಳು ಹಾಗೂ ಅಲ್ಲಿನ ಭಾರತೀಯ ಮೂಲದವರು, ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದರು.
2006ರಿಂದ ಪ್ರಾರಂಭ: ಮಾರಿಷಸ್‍ನಲ್ಲಿ 2006ರಲ್ಲಿ ಸ್ಥಾಪಿತವಾದ ಜೆಎಸ್‍ಎಸ್ ಅಕಾಡೆಮಿ ಆ ದೇಶದಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು ನೀಡಿದ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ಬಳಿಕ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡು ಆರೋಗ್ಯ ವಿಜ್ಞಾನ, ಲೈಫ್ ಸೈನ್ಸ್ ಹಾಗೂ ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ 9 ಯುಜಿ, ಪಿಜಿ ಕೋರ್ಸ್‍ಗಳನ್ನೂ ನಡೆಸುತ್ತಿದೆ. ಜೆಎಸ್‍ಎಸ್ ಎಜುಕೇಶನ್ ಫೌಂಡೇಷನ್ ಪ್ರೈ.ಲಿ ಇದನ್ನು ನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಮಾರಿಷಸ್‍ನ ವಯಾಸ್ ಉಪನಗರದ ಬೋನ್‍ಟೇರ್‍ನಲ್ಲಿ 8 ಎಕರೆ ಪ್ರದೇಶದ ಕ್ಯಾಂಪಸ್‍ನ 14,689 ಚ.ಮೀ. ವಿಸ್ತೀರ್ಣದಲ್ಲಿ ಅಕಾಡೆಮಿಯ ಕಟ್ಟಡ ನಿರ್ಮಿಸಲಾಗಿದೆ. ಅಂತರರಾಷ್ಟ್ರೀಯ ದರ್ಜೆಯ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಸಿಮ್ಯುಲೇಷನ್ ಮತ್ತು ಕೌಶಲ ತರಬೇತಿ, ಹಾಗೂ ವಸತಿ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪದವಿ ಪ್ರದಾನ ಅಧಿಕಾರ ಹೊಂದಿರುವ ಸಂಸ್ಥೆಯಾಗಿ 2018ರಲ್ಲಿ ನೋಂದಣಿಯಾಗಿದೆ. 12 ದೇಶಗಳ ವಿದ್ಯಾರ್ಥಿಗಳು ಈಗ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಜಾಗತಿಕ ಸ್ಥಾನಮಾನ: ಮಾರಿಷಸ್‍ನ ಜೆಎಸ್‍ಎಸ್ ಎಎಚ್‍ಇಆರ್ ಸಂಸ್ಥೆ 2024ರಲ್ಲಿ ಟೈಮ್ಸ್ ಹೈಯರ್ ಎಜುಕೇಶನ್ ಸಬ್-ಸಹಾರನ್ ಆಫ್ರಿಕಾದ ಬ್ಯಾಂಕಿಂಗ್‍ನಲ್ಲಿ 81-100 ಶ್ರೇಣಿಯಲ್ಲಿದ್ದರೆ, ವಿದ್ಯಾರ್ಥಿ ಪಾಲ್ಗೊಳ್ಳುವಿಕೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಎಂಬಿಬಿಎಸ್ ಶಿಕ್ಷಣ ಮಾರಿಷಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಮನ ಸೆಳೆಯಲಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಿ ಮಾರಿಷಸ್ ಶಿಕ್ಷಣ ಕ್ಷೇತ್ರವನ್ನು ಸುಭದ್ರಗೊಳಿಸುತ್ತದೆ. ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನವೀನತೆಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ನಿರ್ದೆಶಕ ಶಂಕರಪ್ಪ, ಜೆಎಸ್‍ಎಸ್‍ಎಎಚ್ ಇಆರ್ ಉಪಕುಲಪತಿ ಡಾ.ಎಚ್.ಬಸವನಗೌಡಪ್ಪ, ಕುಲಸಚಿವ ಡಾ.ಬಿ.ಮಂಜುನಾಥ್ ಇದ್ದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮನವಿಯ ಮೇರೆಗೆ ಮಾರಿಷಸ್‍ನಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಯಿತು. ವಿದೇಶದಲ್ಲಿ ವೈದ್ಯಕೀಯ
ಶಿಕ್ಷಣ ಪಡೆಯಬೇಕೆಂದು ಬಯಸುವ ಭಾರತದ ವಿದ್ಯಾರ್ಥಿಗಳಿಗೆ ಅನುವಾಗಲೆಂದು ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗುತ್ತಿದ್ದು, ಮಾರಿಷಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ.
- ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ
ಮಾರಿಷಸ್‍ನಲ್ಲಿ ಬಹುತೇಕ ಮಂದಿ ಭಾರತೀಯ ಮೂಲದವರೇ ಆಗಿದ್ದಾರೆ. ಹೀಗಾಗಿ ಇಲ್ಲಿಂದ ಭಾರತೀಯರು ಹೋಗಿ ವಿದ್ಯಾಭ್ಯಾಸ ಮಾಡುವುದು ಕಷ್ಟದ ಕೆಲಸವಾಗದು. ಈ ಕೋರ್ಸ್ ಮಾರಿಷಸ್ ಸರ್ಕಾರದಿಂದ ಅನುಮೋದನೆ ದೊರೆತಿದೆ. ಶುಲ್ಕ ಸಹಾ ಕಡಿಮೆ ಇರಲಿದೆ. ಅಕಾಡೆಮಿ ಎಂಬಿಬಿಎಸ್ ಪದವಿ ನೀಡಿದರೆ, ಅದಕ್ಕೆ ಎಲ್ಲೆಡೆ ಮಾನ್ಯತೆ ಇದೆ.•
-ಡಾ.ಬಿ.ಸುರೇಶ್, ಸಹ ಕುಲಪತಿ, ಜೆಎಸ್‍ಎಸ್ ಎಎಸ್‍ಇಆರ್