ಮೈಸೂರು ಪ್ರತಿಷ್ಠಿತ ಸೇಂಟ್ ಫಿಲೋಮಿನಾಸ್ ಕಾಲೇಜಿನಲ್ಲಿ ಮೈಸೂರು ನಗರ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ

 

ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಯಾಗಿ, ಕ್ರೀಡಾಪಟುವಾಗಿ, ಕ್ರೀಡೆಯಲ್ಲಿ ಸಾಧನೆ ಮಾಡಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆದು, ಉನ್ನತ ಅಧಿಕಾರಿಯಾಗಿ ಇದೇ ಕಾಲೇಜಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದು ನನಗೆ ಹೆಮ್ಮೆ ಎನಿಸಿದೆ ಎಂದು

ಸಂತ ಫಿಲೋಮಿನಾಸ್ ಕಾಲೇಜಿನ ಹಳೆಯ ವಿದ್ಯಾರ್ಥಿ, ಡೆಪ್ಯೂಟಿ ಚೀಫ್ ಚೆಕಿಂಗ್ ಇನ್ಸ್‌ಪೆಕ್ಟರ್ ಕೆ.ಗುರುರಾಜ್ ಹೇಳಿದರು.

ನಗರದ ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಓಕ್ ಜುಬಿಲಿ ವರ್ಷದ ಭಾಗವಾಗಿ ಅ.೧೪ ರಿಂದ ೧೭ ರವರೆಗೆ ಕಾಲೇಜು ಫುಟ್ಬಾಲ್ ಮೈದಾನದಲ್ಲಿ ಆಯೋಜಿಸಿರುವ ೨೦೨೫-೨೬ರ ಮೈಸೂರು ನಗರ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಸಾಧನೆಗೆ ಜೋತು ಬೀಳಬಾರದು, ದೈಹಿಕ ಸಾಮರ್ಥ್ಯ ಇರುವವರು ಕ್ರೀಡೆಯಲ್ಲೂ ಸಾಧನೆ ಮಾಡಬಹುದು,  

ಇದಕ್ಕೆ ಪೋಷಕರ ಸಹಕಾರ ಅಗತ್ಯವಾಗಿದೆ, ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ, ಅದನ್ನು ಗುರಿಯಾಗಿಟ್ಟುಕೊಂಡು ಸಾಧನೆ ಮಾಡಬೇಕು, ನಿಮ್ಮ ಸಾಧನೆಯನ್ನು ಕಂಡು ಸಂತಸಪಡುವವರಲ್ಲಿ ನಿಮ್ಮ ಗುರುಗಳೇ ಮೊದಲಿಗರು ಎಂಬುದನ್ನು ಎಲ್ಲ ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ರೆಕ್ಟರ್ ಡಾ.ಲೂರ್ದು ಪ್ರಸಾದ್ ಜೋಸೆಫ್ ಅವರು ಮಾತನಾಡಿ, ಸಂತ ಫಿಲೋಮಿನಾ ಕಾಲೇಜಿನಲ್ಲಿ ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣವಿದೆ. ಇದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಲು ವಿಫುಲ ಅವಕಾಶವಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ಮೈಸೂರಿನ ಕ್ರೀಡಾ ಮಂಟಪದ ಆಶ್ರಯದಲ್ಲಿ, ಮೈಸೂರಿನ ಟೆರೇಸಿಯನ್ ಕಾಲೇಜಿನ ಸಹಯೋಗದೊಂದಿಗೆ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇಂಟ್ ಫಿಲೋಮಿನಾ ಕಾಲೇಜಿನ ರೆಕ್ಟರ್ ರೆವರೆಂಡ್ ಡಾ. ಲೂರ್ದು ಪ್ರಸಾದ್ ಜೋಸೆಫ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕ್ಯಾಂಪಸ್ ಆಡಳಿತಾಧಿಕಾರಿ ರೆವರೆಂಡ್ ಫಾದರ್ ಜ್ಞಾನ ಪ್ರಗಾಸಂ, ರೆಕ್ಟರ್ ಸಹಾಯಕರಾದ ರೆವರೆಂಡ್ ಫಾದರ್ ಡೇವಿಡ್ ಸಗಯರಾಜ್ ಎಸ್., ಪ್ರಾಂಶುಪಾಲರಾದ ಡಾ. ರವಿ ಜೆ.ಡಿ. ಸಲ್ಡಾನ್ಹಾ, ಉಪ ಪ್ರಾಂಶುಪಾಲರಾದ ರೊನಾಲ್ಡ್ ಪ್ರಕಾಶ್ ಕುಟಿನ್ಹಾ ಭಾಗವಹಿಸಿದ್ದರು.