ಸರಗೂರು: ವನ್ಯಜೀವಿ ಮತ್ತು ಮಾನವರ ನಡುವಿನ ಸಂಘರ್ಷದ ಮತ್ತೊಂದು ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಳ್ಳೂರು ಗ್ರಾಮಕ್ಕೆ ಸೇರಿಕೊಂಡಂತಿರುವ ಬೆಣ್ಣೆಗೆರೆ ಗ್ರಾಮದ ಸಮೀಪ ಯಡಿಯಾಲ ಬಳಿ ನಡೆದಿದ್ದು, ಭಾನುವಾರ ಹುಲಿಯ ಭೀಕರ ದಾಳಿಗೆ ರೈತನೊಬ್ಬ ಮರಣಹೊಂದಿದ್ದಾನೆ.
ರಾಜಶೇಖರ್(55) ಹುಲಿ ಭೀಕರ ದಾಳಿಗೆ ಮೃತಪಟ್ಟ ರೈತ, ಘಟನೆ ಬಳಿಕ ಈ ಪ್ರದೇಶದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮೂರ್ನಾಲ್ಕು ದಿನಗಳ ಹಿಂದೆ ಇದೇ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಕೂಬಿಂಗ್ ವೇಳೆ ಹುಲಿ ದಾಳಿಯಿಂದ ರೈತ ಮಹದೇವ ಗಂಭೀರವಾಗಿ ಗಾಯಗೊಂಡ ಘಟನೆ ಮಾಸುವ ಮುನ್ನ ಈ ದುರ್ಘಟನೆ ನಡೆದಿದೆ.
ಹುಲಿ ದಾಳಿಗೆ ಬಲಿಯಾದ ರೈತ ಬೆಣ್ಣೆಗೆರೆ ಗ್ರಾಮದ ರಾಜಶೇಖರ್ ಎಂಬುವವರು. ಮುಳ್ಳೂರು ಹತ್ತಿರ ಇವರ ಜಮೀನಿನ ಪಕ್ಕ ದನ ಮೇಯಿಸಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯಡಿಯಾಲ ವನ್ಯಜೀವಿ ವಿಭಾಗದ ನಗು ವಲಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬೆಣ್ಣೆಗೆರೆ ಗ್ರಾಮದ ಹೊಲದ ಬಳಿ ಹುಲಿ ಏಕಾಏಕಿ ರಾಜಶೇಖರ್ ಅವರ ಮೇಲೆ ದಾಳಿ ಮಾಡಿದೆ. ದಾಳಿಯ ರಭಸಕ್ಕೆ ರಾಜಶೇಖರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಈ ಘಟನೆಯಿಂದ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ದೂರಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಹುಲಿಯ ಓಡಾಟ ಇತ್ತು. ಈ ಬಗ್ಗೆ ಇಲ್ಲಿನ ಸುತ್ತಮುತ್ತಲ ಜಮೀನಿನ ರೈತರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಅವರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಗ್ರಾಮಸ್ಥರು ಮಾತನಾಡಿ "ನಮಗೆ ಈಗ ಜೀವಭಯ ಶುರುವಾಗಿದೆ. ಪ್ರತಿ ದಿನ ನಾವುಗಳು ನಮ್ಮ ಜಮೀನಿಗೆ ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಭಯ ಆಗುತ್ತಿದೆ ಅರಣ್ಯ ಇಲಾಖೆ ಕೂಡಲೇ ಹುಲಿಯನ್ನು ಸೆರೆ ಹಿಡಿಯಬೇಕು. ಇಲ್ಲವಾದರೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಗ್ರಾಮಸ್ಥರನ್ನು ಸಮಾಧಾನಪಡಿಸುವ ಪ್ರಯತ್ನ ನಡೆದಿದೆ. ಮೃತ ರೈತ ರಾಜಶೇಖರ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿರುವ ಅಧಿಕಾರಿಗಳು ನೀಡಿದ್ದು, ಹುಲಿಯನ್ನು ಸೆರೆ ಹಿಡಿಯಲು ತಕ್ಷಣವೇ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಹುಲಿಗಳ ಓಡಾಟ ಹೆಚ್ಚಾಗುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ.
ವನ್ಯಜೀವಿಗಳ ಸಂರಕ್ಷಣೆ ಜೊತೆಗೆ ಮಾನವ ಜೀವಕ್ಕೆ ಬೆಲೆ ಕೊಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ತುರ್ತು ಕ್ರಮಗಳು ಏನಿರಲಿವೆ ಎಂಬುದನ್ನು ಕಾದು ನೋಡಬೇಕಿದೆ.
ಈ ಹಿಂದೆ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಕೂಬಿಂಗ್ ವೇಳೆ ಹುಲಿ ದಾಳಿಯಿಂದ ರೈತ ಮಹದೇವ ಗಂಭೀರವಾಗಿ ಗಾಯಗೊಂಡವರು. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕಳೆದ ತಿಂಗಳಿಂದ ಹುಲಿ ಕಾಣಿಸಿಕೊಂಡು ಜನರಲ್ಲಿ ಅತಂಕವಾಗಿತ್ತು. ಇದರಿಂದಾಗಿ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಈ ಸಂಬಂಧ ಪಟ್ಟು ಹಿಡಿದು ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಮುಖಂಡರು ತಡೆ ನೀಡಿ, ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೀರಾ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಶಾಸಕರಾದ ಅನಿಲ್ ಚಿಕ್ಕಮಾದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಇಷ್ಟೊತ್ತಾದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಯಾರು ಸ್ಥಳಕ್ಕೆ ಬಂದಿಲ್ಲವೆಂದು ತರಾಟೆಗೆ ತೆಗೆದುಕೊಂಡರು. ಈ ಸಂಬಂಧ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪರಮೇಶ್ ಹಾಗೂ ಯಡಿಯಾಲ ಉಪ ವಿಭಾಗದ ಎಸಿಎಫ್ ಡಿ. ಪರಮೇಶ್ ಹಾಗೂ ಹುಣಸೂರಿನ ಆರಕ್ಷಕ ಡಿವೈಎಸ್ಪಿ ಗೋಪಾಲಕೃಷ್ಣ, ಸರಗೂರು ಆರಕ್ಷಕ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಆರಕ್ಷಕ ಉಪ ನಿರೀಕ್ಷಕರುಗಳಾದ ಕಿರಣ್ ಕುಮಾರ್, ಚಂದ್ರಹಾಸ ಚೆನ್ನನಾಯಕ್ ಅರಣ್ಯ ಇಲಾಖೆ ಸಿಬ್ಬಂದಿಗಳು, ಪೆÇೀಲಿಸ್‍ಇಲಾಖೆ ಸಿಬ್ಬಂದಿಗಳು, ಹಾಗೂ ಪೆÇಲೀಸ್ ಇಲಾಖೆ ವಿಶೇಷ ತುಕಡಿಗಳು ಸ್ಥಳಕ್ಕೆ ಆಗಮಿಸಿದವು. ರಾಜ್ಯ ಕಲ್ಯಾಣ ರೈತ ಸಂಘದ ಅಧ್ಯಕ್ಷ ಚಂದನ್ ಗೌಡ ಹಾಗೂ ಪದಾಧಿಕಾರಿಗಳು, ಕೋಟೆ ಸರಗೂರ್ ತಾಲೂಕಿನ ರೈತ ಸಂಘದ ಅಧ್ಯಕ್ಷರುಗಳು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಇಲಾಖಾಧಿಕಾರಿಗಳ ಜೊತೆ ಚರ್ಚಿಸಿದರು.
ಎಸ್‍ಟಿಎಫ್ ತಂಡ, ನುಗು ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು. ಈ ಸಂಬಂಧ ಸ್ಥಳದಲ್ಲಿ ಇದನ್ನು ವೀಕ್ಷಿಸಲು ಸಾವಿರಾರು ಮಂದಿ ಸುಮಾರು ಮೈಲಿಗಟ್ಟಲೆ ಕಾರು ವಾಹನಗಳು ಬೈಕ್‍ಗಳು ನಿಲ್ಲಿಸಿದ್ದು ಕಂಡುಬಂತು....





 
 
 
