ಅಭಿಮಾನಿಗಳಿಂದ ಚಿತ್ರನಟ, ಕಾವೇರಿ ಹೋರಾಟಗಾರ ಜಯಪ್ರಕಾಶ್ (ಜೆಪಿ) ಹುಟ್ಟುಹಬ್ಬ ಭರ್ಜರಿಯಾಗಿ ಆಚರಣೆ

ನೂತನ ಚಲನಚಿತ್ರಕ್ಕೆ ಮುಹೋರ್ತ, ಅನ್ನದಾನ, ಅಭಿಮಾನಿಗಳಿಂದ ಪುಷ್ಪವೃಷ್ಠಿ 


 • ವರದಿ : ನಿಷ್ಕಲ ಎಸ್.ಗೌಡ

ಮೈಸೂರು : ಚಲನ ಚಿತ್ರನಟ, ಕಾವೇರಿ ಹೋರಾಟಗಾರ ಜಯಪ್ರಕಾಶ್(ಜೆಪಿ) ಅವರು ತಮ್ಮ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಮಂಗಳವಾರ ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡರು.

ಮಂಗಳವಾರ ಬೆಳಗ್ಗೆ ಅವರು ನಂಜನಗೂಡು ನಂಜುಡೇಶ್ವರ ದೇವಾಲಯ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ ದೇವಾಲಯದಿಂದ ಡಾ.ರಾಜಕುಮಾರ್ ಉದ್ಯಾನವನಕ್ಕೆ ಅವರನ್ನು ಕಲಾತಂಡಗಳ ಮೆರವಣಿಗೆ ಮೂಲಕ ಅಭಿಮಾನಿಗಳು ಕರೆತಂದರು. ಬಳಿಕ ಪಾರ್ಕ್‍ನಲ್ಲಿರುವ ಡಾ.ರಾಜ್ ಪುತ್ಥಳಿಗೆ ಮಾಲಾರ್ಪಣೆ, ಡಾ.ಪುನಿತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿದರು. ಈ ವೇಳೆ ಜೆಪಿಗೆ ಜಯಮಾಗಲಿ ಎಂದು ಅಭಿಮಾನಿಗಳು ಘೋಷಣೆ ಕೂಗಿದರು.

ಈ ವೇಳೆ ಅಭಿಮಾನಿಗಳು ಜೆಪಿ ಅವರ ಮೇಲೆ ಪುಷ್ಪವೃಷ್ಠಿಗೈದರು.

ಇದಾದ ಬಳಿಕ ಅವರು ನಟಿಸುತ್ತಿರುವ ಭಾಗ್ಯವಂತ ನೂತನ ಚಲನಚಿತ್ರದ ಮುಹೋರ್ತವೂ ನಡೆಯಿತು. ಮೊದಲ ಶಾಟ್‍ಗೆ ಜೆಪಿ ಮತ್ತಿತರ ಸಹ ನಟರ ಜತೆಗೂಡಿ ಅಭಿನಯಿಸಿದರು.

ಬಳಿಕ ಮಾಧ್ಯಮದವರ ಜತೆ ಅವರು ಮಾತನಾಡಿ, ಸಾವಿರಾರು ಅಭಿಮಾನಿಗಳು, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು ಸಮ್ಮುಖದಲ್ಲಿ ನನ್ನ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ನಾನು ನಟಿಸಿರುವ ಭಗೀರಥ ಚಿತ್ರ 200 ದಿನ ಪ್ರದರ್ಶನವಾಗಿದೆ. ದಿಗ್ಡರ್ಶಕ ಚಿತ್ರದ ಚಿತ್ರೀಕರಣ ಬಾಕಿ ಇದೆ, ಇನ್ನೂ ಎರಡು ಚಿತ್ರಗಳು ಸೆಟ್ಟೇರಲಿವೆ ಎಂದರು. 

ಈ ಸಂದರ್ಭದಲ್ಲಿ ನಿರ್ಮಾಪಕ ಚೇತನ್ ರಮೇಶ್, ಹೋರಾಟಗಾರ ತೇಜಸ್ ಲೋಕೇಶ್‍ಗೌಡ, ಭಾಗ್ಯವಂತ ಚಿತ್ರದ ನಿರ್ದೇಶಕರು, ನಿರ್ಮಾಪಕರು, ಚಿತ್ರತಂಡ, ಕಾವೇರಿ ಕ್ರಿಯಾ ಸಮಿತಿಯ ಭಾಗ್ಯಮ್ಮ, ಇತರೆ ಪದಾಧಿಕಾರಿಗಳು, ಜೆಪಿ ಅವರ ಸಾವಿರಾರು ಅಭಿಮಾನಿಗಳು ಹಾಜರಿದ್ದರು.