ಸರಗೂರು ತಾಲ್ಲೂಕು ಸಾಗರೆ ಗ್ರಾಮದಲ್ಲಿ ವೃದ್ಧ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಆರೋಪ


 ಶಾಸಕ ಅನಿಲ್ ಚಿಕ್ಕಮಾದು ದಿವ್ಯ ಮೌನ, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ನಂಜೇಗೌಡರ ಕುಟುಂಬದವರ ಜತೆ ಮಾತನಾಡಿದರೆ ೧೦ ಸಾವಿರ ದಂಡ ಘೋಷಣೆ

ಸುಳ್ಳು ದಾಖಲೆ ಸೃಷ್ಟಿಸಿ, ಜೆಸಿಬಿ ತಂದು ನಂಜೇಗೌಡರ ಮನೆ ಕೆಡವುತ್ತೇವೆ ಎಂದು ಬೆದರಿಕೆ  

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಜಾಪಾರ್ಟಿ ಅಧ್ಯಕ್ಷ ಡಾ.ಬಿ.ಶಿವಣ್ಣ ಜಿಲ್ಲಾಡಳಿತಕ್ಕೆ ಒತ್ತಾಯ

ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ಸರಗೂರು ತಾಲ್ಲೂಕು, ಸಾಗರೆ ಗ್ರಾಮದ ಎಸ್.ಎಂ.ನಂಜೇಗೌಡ ಮತ್ತು ದೊಡ್ಡತಾಯಮ್ಮ ಎಂಬವರ ಕುಟುಂಬಕ್ಕೆ ಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಜಿಲ್ಲಾಡಳಿತ ಕೂಡಲೇ ಬಹಿಷ್ಕಾರ ಹಾಕಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷರಾದ ಡಾ.ಬಿ.ಶಿವಣ್ಣ ಎಚ್ಚರಿಕೆ ನೀಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಾಗರೆ ಗ್ರಾಮದ ಮುಖಂಡರುಗಳಾದ ಶಿವಲಿಂಗೇಗೌಡ, ಎಸ್.ಬಿ. ನಾಗೇಶ, ಎಸ್.ಎನ್.ಪ್ರತಾಪ, ಸೋಮೇಗೌಡ, ಜಯಪ್ಪ, ಎಸ್.ಎಸ್.ಸ್ವಾಮಿ
ಮತ್ತು ಕರಿನಾಯಕ ಎಂಬವರೇ ನಂಜೇಗೌಡ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ವ್ಯಕ್ತಿಗಳಾಗಿದ್ದು, ಪೊಲೀಸರು ಕೂಡಲೇ ಇವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಡಾ.ಬಿ.ಶಿವಣ್ಣ ಆಗ್ರಹಿಸಿದರು. 
ನಂಜೇಗೌಡರು ಗ್ರಾಮದ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಸತತವಾಗಿ ಸಾಗರೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸುತ್ತಾ ಜನಮನ್ನಣೆ ಗಳಿಸಿರುತ್ತಾರೆ.
ಸುಮಾರು 50 ವರ್ಷಗಳಿಂದ ಅವರ ಪಿತ್ರಾರ್ಜಿತ ಜಾಗದಲ್ಲಿ ವಾಸದ
ಮನೆ ಕಟ್ಟಿಕೊಂಡು ಸಾಗರೆ ಗ್ರಾಮ ಸೇರಿದಂತೆ ಅಕ್ಕ-ಪಕ್ಕದ ಗ್ರಾಮದಲ್ಲಿಯೂ ಗೌರವ ಸಂಪಾದನೆ ಮಾಡಿದ್ದು, ಗ್ರಾಮದ ಅತ್ಯಂತ ಗೌರವಾನ್ವಿತ ಕುಟುಂಬವಾಗಿದೆ, ನಂಜೇಗೌಡರು ಕಟ್ಟಿರುವ ಮನೆಯ ಜಾಗಕ್ಕೆ ಸಾಗರೆ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಸಹ ಪಡೆದು
ಸರ್ಕಾರಕ್ಕೆ ಕಂದಾಯವನ್ನು ಪಾವತಿ ಮಾಡಿರುತ್ತಾರೆ.
ಆದರೆ, ಸಾಗರೆ ಗ್ರಾಮದ ಕೆಲವು ಯಜಮಾನರುಗಳು ಹಾಗೂ ಮುಖಂಡರುಗಳು
ಇವರ ಏಳೆಗೆಯನ್ನು ಸಹಿಸದೇ ಇವರ ಮೇಲೆ ಸುಳ್ಳು ಆಪಾದನೆಗಳನ್ನು ಮಾಡಿ ಕೆಲವು ಸುಳ್ಳು
ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಂಡು ಕಳೆದ ಆಗಸ್ಟ್ 10 ರಂದು ಸಂವಿಧಾನಕ್ಕೆ ವಿರುದ್ಧವಾಗಿ ಗ್ರಾಮದಲ್ಲಿ ಅಕ್ರಮ ಕೂಟವನ್ನು ಕರೆದು ಸಾಗರೆ ಗ್ರಾಮದಲ್ಲಿ ಎಸ್.ಎಂ ನಂಜೇಗೌಡ
ಮತ್ತು ದೊಡ್ಡತಾಯಮ್ಮ ಅವರು ನಿರ್ಮಾಣ ಮಾಡಿರುವ ಮನೆಯ ಜಾಗವು ಸರ್ಕಾರಿ ಖರಾಬು ಆಗಿದ್ದು,
ಮುಂದಿನ ಮೂರು ತಿಂಗಳ ಒಳಗಾಗಿ ಮನೆಯನ್ನು ಖಾಲಿ ಮಾಡಬೇಕು, ಇಲ್ಲದಿದ್ದ ಪಕ್ಷದಲ್ಲಿ
ನಾವುಗಳೇ ಜೆ.ಸಿ.ಬಿ ಯಂತ್ರವನ್ನು ತಂದು ನಿಮ್ಮ ಮನೆಯನ್ನು ಕೆಡವಿ ಹಾಕುತ್ತೇವೆಂದು ಬೆದರಿಕೆ ಹಾಕಿ
ಅವರನ್ನು ಹೆದರಿಸಿ, ಇದು ಪಂಚಾಯಿತಿಯ ತೀರ್ಮಾನವಾಗಿದೆ ಎಂದು ಬೆದರಿಕೆ ಒಡ್ಡಿರುತ್ತಾರೆ.
ಹಾಗೇಯೇ ಇವರು ವಾಸಿಸುವ ಮನೆಯನ್ನು ತೆರವುಗೊಳಿಸುವ ತನಕ ಗ್ರಾಮದ ಯಾರೊಬ್ಬರು ಇವರುಗಳ
ಜೊತೆ ಮಾತನಾಡಬಾರದು, ಅಂಗಡಿ ಮುಂಗ್ಗಟ್ಟುಗಳಲ್ಲಿ ಇವರುಗಳಿಗೆ ಸಾಮಾನು ಸರಂಜಾಮುಗಳನ್ನು
ಕೊಡಬಾರದು, ಯಾವುದೇ ರೀತಿಯ ಸಹಾಯ ಮಾಡಬಾರದೆಂದು ಕಾನೂನಿಗೆ ವಿರುದ್ಧವಾಗಿ
ನಂಜೇಗೌಡ ಕುಟುಂಬಕ್ಕೆ ಸಾಮಾಜಿಕ ಬಹಿಷ್ಠಾರವನ್ನು ಹಾಕಿರುತ್ತಾರೆ ಇದರಿಂದ ಈ ಕುಟುಂಬ ಮಾನಸಿಕ ಖಿನ್ನತೆಗೆ ಒಳಗಾಗಿದೆ. ಈ ಬಗ್ಗೆ ಶಾಸಕರಾದ ಅನಿಲ್ ಚಿಕ್ಕಮಾದು, ತಾಲ್ಲೂಕು ಆಡಳಿತ ಮತ್ತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡಾ.ಶಿವಣ್ಣ ಕಿಡಿ ಕಾರಿದರು.
ಸಾಮಾಜಿಕ ಬಹಿಷ್ಕಾರ ಹಾಕುವುದು ಕಾನೂನು ಪ್ರಕಾರ ಅಪರಾಧ, ಕಳೆದ ಎರಡು ತಿಂಗಳಿನಿಂದ ನಂಜೇಗೌಡರ ಕುಟುಂಬಕ್ಕೆ ಗ್ರಾಮದ ಕೆಲವು ಮುಖಂಡರು ಬೆದರಿಕೆ ಒಡ್ಡುತ್ತಿದ್ದಾರೆ. ನಂಜೇಗೌಡರು ಕಟ್ಟಿರುವ ಮನೆಗೆ ಇ ಸ್ವತ್ತು ಇದೆ, ಕಂದಾಯ ಪಾವತಿ ಮಾಡಲಾಗಿದೆ. ವ್ಯತ್ಯಾಸಗಳಿದ್ದರೆ ಕಾನೂನು ಇದೆ. ಅದನ್ನು ಬಿಟ್ಟು ಸಾಮಾಜಿಕ ಬಹಿಷ್ಕಾರ ಹಾಕುವುದು, ಬೆದರಿಕೆ ಒಡ್ಡುವುದು ತಪ್ಪು, ಈ ವಿಚಾರದಲ್ಲಿ ಪೊಲೀಸರು ಮತ್ತು ತಾಲ್ಲೂಕು ಆಡಳಿತ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಇವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು.
ಡಾ.ಬಿ.ಶಿವಣ್ಣ, ಅಧ್ಯಕ್ಷರು ಕರ್ನಾಟಕ ಪ್ರಜಾ ಪಾರ್ಟಿ(ರೈತಪರ್ವ)
ನಮಗೆ ಆತ್ಮಹತ್ಯೆಯೊಂದೇ ದಾರಿ
ನಮ್ಮ ಸ್ವಂತ ಜಮೀನಿನಲ್ಲಿ ಮನೆ ಕಟ್ಟಿದ್ದು, ನಮ್ಮ ಕುಟುಂಬಕ್ಕೆ ಕಳೆದ ಎರಡು ತಿಂಗಳಿನಿಂದ ಗ್ರಾಮದ ಕೆಲವು ಮುಖಂಡರು ಮನೆ ಕೆಡವುದಾಗಿ ಬೆದರಿಕೆ ಒಡ್ಡಿ, ಅಕ್ರಮ ದಾಖಲೆ ಸೃಷ್ಟಿಸಿ ನಮಗೆ ಕಿರುಕುಳ ನೀಡುತ್ತಿದ್ದಾರೆ. ಮನೆ ಕೆಡವುತನಕ ನಮ್ಮೊಂದಿಗೆ ಮಾತನಾಡಬಾರದು, ಗ್ರಾಮದಲ್ಲಿ ನಮಗೆ ಅಂಗಡಿಗಳಲ್ಲಿ ಸಾಮಾನು ಸರಂಜಾಮು ನೀಡಬಾರದೆಂದು ಬಹಿಷ್ಕಾರ ಹಾಕಿದ್ದಾರೆ. ಇದು ಅಮಾನವೀಯ ಇದರ ವಿರುದ್ಧ ಕ್ರಮ ಜರುಗಿಸಬೇಕು
ಎಸ್.ಎಂ. ನಂಜೇಗೌಡ, ಬಹಿಷ್ಕಾರ ಒಳಗಾದ ವೃದ್ಧ