ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ನಾನು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಚೇರ‍್ಮನ್ ಅಲ್ಲ, ವಾಚಮನ್ ಆಗಿದ್ದೇನೆ. ಸಚಿವರಾದ ಝಮೀರ್ ಅಹಮದ್ ಖಾನ್ ಅವರು ನನಗೆ ವಕ್ಫ್ ಆಸ್ತಿಗಳನ್ನು ಕಾಯಲು ನೇಮಕ ಮಾಡಿದ್ದು, ಈ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ ಎಂದು ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಝೀಜುಲ್ಲ ಅಲಿಯಾಸ್ ಅಜ್ಜು ಹೇಳಿದರು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಈದ್ ಮಿಲಾದ್ ಅಂಗವಾಗಿ ನಗರದ ವಕ್ಫ್ ಸಮಿತಿ ಕಚೇರಿ ಆವರಣದಲ್ಲಿ ಸೋಮವಾರ ಮೈಸೂರು ನಗರ ಮತ್ತು ಜಿಲ್ಲೆಯ ನೂರಕ್ಕೂ ಹೆಚ್ಚು ಮುಸ್ಲಿಂ ವಿಧವೆಯರಿಗೆ ಹೈಟೆಕ್ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾನು ಅಧ್ಯಕ್ಷನಾಗಿ ೨ ತಿಂಗಳಾಗಿದೆ. ಎರಡು ತಿಂಗಳಲ್ಲಿ ಸಮುದಾಯದ ಮಕ್ಕಳಿಗೆ ಸ್ಕಾಲರ್‌ಶಿಪ್, ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ೧೦೦ಕ್ಕೂ ಹೆಚ್ಚು ವಿಧವೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಮಹಿಳೆಯರು ಸ್ವಾಭಿಮಾನದಿಂದ ಸ್ವಯಂ ಉದ್ಯೋಗ ನಡೆಸಿ ಬದುಕು ಕಟ್ಟಿಕೊಳ್ಳಲು ವಕ್ಫ್ ಸಲಹಾ ಸಮಿತಿ ಮೂಲಕ ಒಂದು ಸಣ್ಣ ಪ್ರಯತ್ನ ನಡೆಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಮಾತನಾಡಿ,
‘ರಾಜಕಾರಣ ಜನರನ್ನು ಬೇರ್ಪಡಿಸಿದರೆ, ಧರ್ಮ ಒಂದುಗೂಡಿಸುತ್ತದೆ. ಧರ್ಮವೆಂದರೆ ಕರುಣೆ, ಬಡವರ ಸೇವೆಯೇ ನಿಜವಾದ ಧರ್ಮ’ ಪೈಗಂಬರ್ ಅವರ ಆಶಯದಂತೆ ಅಜ್ಜು ಅವರು ಇಂದು ನಿರ್ಗತಿಕ ಬಡ ವಿಧವೆಯರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಅತ್ಯುತ್ತಮವಾದ ಬೆಲೆಬಾಳುವ ಹೊಲಿಗೆ ಯಂತ್ರಗಳನ್ನು ನೀಡುತ್ತಿರುವುದು ಸ್ವಾಗತಾರ್ಹ, ಇವರ ಸೇವೆ ಹೀಗೆಯೇ ಮುಂದುವರಿಯಲಿ ಎಂದು ಹೇಳಿದರು.
ಮಹಮ್ಮದ್ ಪೈಗಂಬರ್ ಅವರು ಕರುಣೆಯ ಮಾರ್ಗವನ್ನು ಜೀವನದುದ್ದಕ್ಕೂ ಬೋಧಿಸಿದ್ದಾರೆ. ದೀನ, ದಮನಿತರ ಬದುಕಿನ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಬಡವರ ಬದುಕಿಗೆ ಸಹಕರಿಸುವುದರಲ್ಲಿಯೇ ಭಗವಂತನಿದ್ದಾನೆ. ಎಲ್ಲ ಧರ್ಮಗಳೂ ಇದನ್ನೇ ಬೋಧಿಸುತ್ತವೆ’ ಎಂದರು.
ಮೌಲಾನಾ ಝಹೀರ್ ಅಹ್ಮದ್ ಸಿದ್ದಿಖಿ ಮಾತನಾಡಿ, ‘ಬಡ ವಿಧವೆಯರ ಜೀವನಕ್ಕೆ ಸಹಕರಿಸುವ ಕಾರ್ಯ ಪೈಗಂಬರರಿಗೆ ಅತ್ಯಂತ ಪ್ರಿಯವಾದುದು. ಸರ್ವ ಧರ್ಮದ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ನಡೆಯುತ್ತಿರುವ ಪುಣ್ಯ ಕಾರ್ಯವಿದು’ ಎಂದರು.
ಇದೇ ವೇಳೆ ಮೈಸೂರು ನಗರದ ವಿವಿಧ ಬಡಾವಣೆಗಳು ಮತ್ತು ತಿ.ನರಸೀಪುರ ಬನ್ನೂರು, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು, ಕೆ.ಆರ್.ನಗರ ಸೇರಿದಂತೆ ವಿವಿಧ ಪ್ರದೇಶಗಳ ೧೦೦ ವಿಧವಾ ಮುಸ್ಲಿಂ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರಿನ ಸರ್‌ಖಾಜಿ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೇಬ್, ಖಾಜಿ ಷರಿಯತ್ ಹಜರತ್ ಮುಫ್ತಿ ಸೈಯದ್ ತಾಜುದ್ದೀನ್ ಸಾಹೇಬ್, ಸೆಂಟ್ ಫಿಲೋಮಿನಾ ಚರ್ಚ್‌ನ ಮ್ಯಾಥ್ಯು ಫರ್ನಾಂಡಿಸ್, ಮೌಲಾನಾ ಝಾಹೀರ್ ಅಹ್ಮದ್ ಸಿದ್ದಿಖಿ, ಸೂಫಿ ಅಜೀಮ್ ಅಲಿ ಶಾ ಚಿಸ್ತಿ, ಕಲೀಂ ಉರ್ ರೆಹಮಾನ್, ಮೌಲಾನಾ ಅಬ್ದುಲ್ ಸಲಾಂ, ಮಿರ್ಶಾದ್ ಅಹಮದ್ ಅನ್ವರಿ, ಮಹಮ್ಮದ್ ಸಾಬೀರ್ ಸಾಬ್, ಮುಫ್ತಿ ಮುಷ್ತಾಕ್ ಅಹ್ಮದ್, ಉಮರ್ ಫಾರೂಖ್, ಅಬ್ದುಲ್ ಸಲಾಂ ರಜ್ವಿ ಇದ್ದರು.
ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ೪ ಕೋಟಿ :
ಮೈಸೂರು ಜಿಲ್ಲೆಯ ವಿವಿಧ ವಕ್ಫ್ ಆಸ್ತಿಗಳ ಅಭಿವೃದ್ಧಿಗಾಗಿ ವಕ್ಫ್ ಸಚಿವರೂ ಆದ ಝಮೀರ್ ಅಹಮದ್ ಖಾನ್ ಅವರು ೪ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈ ಹಣದಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗುವುದು.
ಮೈಸೂರಿನಲ್ಲಿ ವಕ್ಫ್ ಭವನ :
ಮೈಸೂರಿನಲ್ಲಿರುವ ವಕ್ಫ್ ಸಲಹಾ ಸಮಿತಿ ಕಚೇರಿಯು ಒಂದು ಚಿಕ್ಕ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೇಲಿನ ಅಂತಸ್ತಿನಲ್ಲಿ ಕಚೇರಿ ಇರುವ ಕಾರಣ, ಹಿರಿಯ ನಾಗರಿಕರು ಹತ್ತಿ ಬರಲು ಕಷ್ಟವಾಗುತ್ತಿದೆ. ಈ ವಿಚಾರವನ್ನು ವಕ್ಫ್ ಸಚಿವರಾದ ಜಮೀರ್ ಅಹಮದ್ ಖಾನ್ ಅವರ ಗಮನಕ್ಕೆ ತಂದಾಗ ಅವರು ನಗರದಲ್ಲಿ ನೂತನ ವಕ್ಫ್ ಭವನ ನಿರ್ಮಾಣಕ್ಕೆ ೩ ಕೋಟಿ ರೂ. ಹಣ ಮಂಜೂರು ಮಾಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅಜ್ಜು ತಿಳಿಸಿದರು.
0 ಕಾಮೆಂಟ್‌ಗಳು