ನಿರುದ್ಯೋಗಿ ಬಿಜೆಪಿ, ಜೆಡಿಎಸ್ ಮುಖಂಡರಿಂದ ಮದ್ದೂರಿನಲ್ಲಿ ಕೋಮು ಗಲಭೆಗೆ ಪ್ರಚೋದನೆ : ಡಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ರೇಹಾನ್ ಬೇಗ್ ಆರೋಪ


ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಹಿಂದೂ ಮುಸ್ಲೀಮರು ಅಣ್ಣ ತಮ್ಮಂದಿರಂತೆ ಬದುಕು ನಡೆಸುತ್ತಿರುವ ಸೌಹಾರ್ಧತೆಯ ನಾಡು, ಸಕ್ಕರೆ ನಗರಿ ಮಂಡ್ಯ ಜಿಲ್ಲೆಯಲ್ಲಿ ಕೆಲವು ಬಿಜೆಪಿ ಮತ್ತು ಜೆಡಿಎಸ್‌ನ ನಿರುದ್ಯೋಗಿ ಮುಖಂಡರಿಂದ ಕೋಮು ಗಲಭೆಗೆ ಪ್ರಚೋದನೆ ನೀಡುವ ಕಾರ್ಯಗಳು ನಡೆಯುತ್ತಿದ್ದು, ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆಸಿದ ಎನ್ನಲಾದ ಮತಗಳವು ಪ್ರಕರಣ ಮರೆಮಾಚಲು ಇಂತಹ ಕೃತ್ಯಗಳು ನಡೆಯುತ್ತಿದ್ದು, ಮಂಡ್ಯ ಜಿಲ್ಲೆಯ ಜನರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ರೇಹಾನ್ ಬೇಗ್ ಹೇಳಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಮದ್ದೂರು ಕಲ್ಲುತೂರಾಟ ಪ್ರಕರಣ ಅಕ್ಷಮ್ಯ, ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರು ಶಿಕ್ಷಾರ್ಹರು, ಮಂಡ್ಯ ಜಿಲ್ಲೆ ಎಸ್.ಎಂ. ಕೃಷ್ಣ ಅವರಂತಹ ಪ್ರಬುದ್ಧ ಮುಖ್ಯಮಂತ್ರಿಗಳನ್ನು ಈ ರಾಜ್ಯಕ್ಕೆ ನೀಡಿದ ಪ್ರಬುದ್ಧ ಮತದಾರರ ಜಿಲ್ಲೆ, ಜಿ.ಮಾದೇಗೌಡರಂತಹ ಹೋರಾಟಗಾರರು, ನಿತ್ಯ ಸಚಿವರಾದ ಕೆ.ವಿ.ಶಂಕರೇಗೌಡರು, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಇದೇ ಮಂಡ್ಯ ಜಿಲ್ಲೆ ರಾಜ್ಯಕ್ಕೆ ಕೊಡುಗೆಯಾಗಿ ನೀಡಿದೆ. ಮಂಡ್ಯ ಜಿಲ್ಲೆ ಸೌಹಾರ್ಧತೆಯ ತವರೂರು, ಇಂತಹ ಜಿಲ್ಲೆಯಲ್ಲಿ ಕೋಮುವಾದ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ, ಆದರೇ, ಈ ಮೂದಲು ನಾನು ಹೇಳಿದಂತೆ ಪ್ರತಾಪ್ ಸಿಂಹ ಅವರಂತಹ ನಿರುದ್ಯೋಗಿ ರಾಜಕಾರಣಿಗಳಿಂದ ಕೋಮು ಪ್ರಚೋದನೆ ಕಾರ್ಯಗಳು ಇಲ್ಲಿ ನಡೆಯುತ್ತಿವೆ. ಅವರನ್ನು ಜಿಲ್ಲೆಯಿಂದ ಹೊರಹಾಕುವ ಪ್ರಯತ್ನ ಮತ್ತು ಪ್ರತಿರೋಧವನ್ನೂ ಸಹ ಮಂಡ್ಯ ಜಿಲ್ಲೆಯ ಜನರು ಈಗಾಗಲೇ ಮಾಡಿದ್ದಾರೆ. ಆದರೇ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ ಮಂಡ್ಯ ಜಿಲ್ಲೆಯಲ್ಲಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸಾಕಷ್ಟು ಹಿಡಿತ ಹೊಂದಿದ್ದು, ಇಂತಹ ಕೋಮು ಗಲಭೆಗಳು ನಡೆದಾಗ ಕನಿಷ್ಠ ಬಿಜೆಪಿ ಮೈಂಡ್‌ಸೆಟ್‌ನಿಂದ ಹೊರಬಂದು ಬಿಜೆಪಿಯನ್ನು ಓಲೈಕೆ ಮಾಡದೆ, ಅಥವಾ ಒಂದು ಸಮುದಾಯವನ್ನು ತೇಜೋವಧೆ ಮಾಡದೆ ಮದ್ದೂರಿನಲ್ಲಿ ಶಾಂತಿ ಕಾಪಾಡಲು ಅಗತ್ಯವಿದ್ದ ಎಲ್ಲ ಕ್ರಮಗಳನ್ನು ಕೈಗೊಳ್ಳಬಹುದಾದ ಸದಾವಕಾಶವನ್ನು ಕಳೆದುಕೊಂಡು, ಪ್ರತಾಪ್ ಸಿಂಹ ಅವರಂತೆ ತಾವೂ ಸಹ ಒಬ್ಬ ನಿರುದ್ಯೋಗಿ, ಜಾತಿವಾದಿ ರಾಜಕಾರಣಿಯಂತೆ ನಡೆದುಕೊಂಡಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆ, ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಹ್ಯಾಟ್ರಿಕ್ ಸೋಲು ಅವರನ್ನು ಕಂಗೆಡಿಸಿ ಅವರನ್ನೂ ಸಹ ನಿರುದ್ಯೋಗಿಯನ್ನಾಗಿ ಮಾಡಿದೆ. ಅವರೂ ಸಹ ಪ್ರಚೋದನೆಗೆ ಮುಂದಾಗಿರುವುದು ವಿಷಾದನೀಯ ಎಂದರು.

ಸರ್ವ ಜನಾಂಗದ ಶಾಂತಿಯ ತೋಟ ಎನಿಸಿರುವ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪದೇ ಪದೇ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದೆ. ಇದು ಕೇವಲ ಮಂಡ್ಯ ಜಿಲ್ಲೆಗೆ ಸೀಮಿತವಲ್ಲ, ಇಡೀ ದೇಶಕ್ಕೆ ಗಲಭೆ ಸೃಷ್ಟಿಸುವ ಕೋಮುವಾದಿ ವಿಚಾರಗಳು  ಬಿಜೆಪಿಯ ಬತ್ತಳಿಕೆಯಲ್ಲಿವೆ. ಇದಕ್ಕೆ ದಿನನಿತ್ಯ ನೂರಾರು ಅಮಾಯಕರು ಬಲಿಯಾಗುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಮಂಡ್ಯ ಪೊಲೀಸರ ಶೀಘ್ರ ಕ್ರಮ ಅಲ್ಲಿ ಹೆಚ್ಚು ಅನಾಹುತ ತಪ್ಪಿಸಿದೆ. ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ಮತ್ತು ಜೆಡಿಎಸ್ ಗಲಭೆಗಳಲ್ಲಿ ರಾಜಕಾರಣ ಮಾಡುತ್ತಾ ಅಮಾಯಕರನ್ನು ಬಲಿ ಪಡೆಯುತ್ತಿದ್ದು, ರಾಜ್ಯದ ಮತದಾರರು ಇವರಿಬ್ಬರನ್ನೂ ಎಂದೂ ಕ್ಷಮಿಸುವುದಿಲ್ಲ ಎಂದು ರೇಹಾನ್ ಬೇಗ್ ಆಕ್ರೋಶದಿಂದ ಹೇಳಿದ್ದಾರೆ. 

ಮತಗಳ್ಳತನದ ತಾಯಿ ಬೇರು ಕರ್ನಾಟಕ ರಾಜ್ಯದ ಮಹದೇವಪುರ ಕ್ಷೇತ್ರವಾಗಿದ್ದು, ಈ ವಿಚಾರವನ್ನು ರಾಹುಲ್ ಗಾಂಧಿ ಅವರ ಮೂಲಕ ಇಡೀ ದೇಶಕ್ಕೆ ಪ್ರಚಾರವಾಗಿ ರಾಷ್ಟ್ರದ ಜನತೆ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಸೆಟೆದುನಿಂತಿತ್ತು. ಈ ವಿಚಾರವನ್ನು ಮರೆಮಾಚಲು ಕರ್ನಾಟದಲ್ಲಿ ಮೊದಲು ಬಾನು ಮುಷ್ತಾಖ್ ಆಯ್ಕೆ ವಿಚಾರ, ನಂತರ ಅವಾಚ್ಯ ಶಬ್ದಗಳ ಟ್ರಂಪ್ ಕಾರ್ಡ್ ಪ್ರಯೋಗ ನಡೆಯುತ್ತದೆ ಎಂದು ಈ ಹಿಂದೆಯೇ ನಾನು ಭವಿಷ್ಯ ನುಡಿದಿದ್ದೆ. ಇದೀಗ ಮದ್ದೂರು ಕಲ್ಲುತೂರಾಟ ಪ್ರಕರಣ ಅದರ ಜತೆ ಸೇರಿಕೊಂಡಿದೆ. ಬಿಜೆಪಿ ಜೆಡಿಎಸ್‌ನ ಈ ಎಲ್ಲ ಆಟಾಟೋಪಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗಿದೆ.

ಡಿ.ರೇಹಾನ್ ಬೇಗ್, ಡಿಸಿಸಿ ಪ್ರಧಾನ ಕಾರ್ಯದರ್ಶಿ