ಪ್ರಶಸ್ತಿಗಳು ನಮ್ಮನ್ನು ಅಣಕಿಸಬಾರದು : ಜಯಪ್ಪ ಹೊನ್ನಾಳಿ
ವರದಿ: ನಿಷ್ಕಲ ಎಸ್.ಗೌಡ, ಮೈಸೂರುಮೈಸೂರು: ದುಂಬಾಲು ಬಿದ್ದು, ಅರ್ಜಿ ಹಾಕಿ, ಶಿಫಾರಸ್ಸು ಮಾಡಿಸಿ, ಹಣ ಕೊಟ್ಟು ಪಡೆದ ಪ್ರಶಸ್ತಿಗಳು ನಮ್ಮನ್ನು ಅಣಕಿಸುತ್ತವೆ. ಆದರೇ, ಸಾಧನೆಯಿಂದ ಪಡೆದ ಪ್ರಶಸ್ತಿಗಳು ಸದಾಕಾಲ ನಮ್ಮನ್ನು ಗೌರವಿಸುತ್ತವೆ ಎಂದು ಸಾಹಿತಿ ಜಯಪ್ಪ ಹೊನ್ನಾಳಿ ಹೇಳಿದರು.
ತಾಲ್ಲೂಕಿನ ಇಲವಾಲ ಸರ್ಕಾರಿ ಪ್ರೌಢಶಾಲೆ ಮತ್ತು ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಬೆಳಗ್ಗೆ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಶಾಲೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂಟು ಜನ ಶಿಕ್ಷಕರು ಪ್ರಶಸ್ತಿ ಪಡೆಯಲು ಯಾವುದೇ ಅರ್ಜಿ ಹಾಕಿಲ್ಲ, ಯಾರಿಂದಲೂ ಶಿಫಾರಸ್ಸು ಮಾಡಿಸಿಲ್ಲ, ಕನ್ನಡ ನೆಲ, ಜಲ, ಭಾಷೆಯ ರಕ್ಷಣೆಗಾಗಿ ದುಡಿಯುತ್ತಿರುವ ಕನ್ನಡಾಂಬೆ ರಕ್ಷಣಾ ವೇದಿಕೆಯು ಈ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ಶಿಕ್ಷಕರ ಗುಣಮಟ್ಟ ಅಥವಾ ಅವರ ಸಾಧನೆಯನ್ನು ಗುರುತಿಸಲು ಯಾವುದೇ ಪರೀಕ್ಷೆಗಳು ನಡೆಸಬೇಕಿಲ್ಲ, ಕೇವಲ ಅವರ ವಿದ್ಯಾರ್ಥಿಳನ್ನು ನೋಡಿದರೆ ಸಾಕು ಶಿಕ್ಷಕರ ಗುಣಮಟ್ಟ ತಿಳಿಯುತ್ತದೆ. ವಿದ್ಯಾರ್ಥಿಗಳೇ ಶಿಕ್ಷಕರ ಪರೀಕ್ಷೆಯ ಮಾನದಂಡ ಎಂದು ವಿವರಣೆ ನೀಡಿದರು.
ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರು ಮಾತನಾಡಿ, ಕಳೆದ ಐದು ವರ್ಷಗಳಿಂದ ನಮ್ಮ ಸಂಘಟನೆ ವತಿಯಿಂದ ಪ್ರತಿವರ್ಷ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕನ್ನಡ ನೆಲ, ಜಲ, ಭಾಷೆಯ ಉಳಿವು ಮತ್ತು ರಕ್ಷಣೆಗಾಗಿ ನಮ್ಮ ಸಂಘಟನೆ ಪ್ರಾಮಾಣಿಕವಾಗಿ ದುಡಿಯುತ್ತಿದೆ. ಇದರ ಜತೆ ದೇಶಕ್ಕೆ ಉತ್ತಮ ನಾಗರಿಕರನ್ನು ಸೃಷ್ಟಿಸುತ್ತಿರುವ ಶಿಕ್ಷಕರು ದೇಶದ ಅಭಿವೃದ್ಧಿ ಮತ್ತು ಉತ್ತಮ ಸಮಾಜ ನಿರ್ಮಾಣದ ರೂವಾರಿಗಳಾಗಿದ್ದಾರೆ. ಅಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಸಹ ನಮ್ಮ ಸಂಘಟನೆಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಇಲವಾಲ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯ ಎಂಟು ಜನ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸಡಲಾಗುತ್ತಿದೆ ಎಂದು ಹೇಳಿದರು.
ತಮ್ಮ ಸಾಧನೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಜಗದೀಶ್ ಕೆ.ಎ., ಮಮತಾ ಎಸ್.ಎಸ್., ಶಶಿಕಲ ಎಸ್.ಎಸ್., ಮಹದೇವು ಡಿ.ಎನ್., ಲಿಂಗರಾಜಪ್ಪ ಎಲ್.ಜಿ., ವಾಸುದೇವ ಬಿ., ಪುರುಷೋತ್ತಮ, ಬಸವರಾಜೇಂದ್ರ ಸ್ವಾಮಿ ಅವರನ್ನು ಇಲವಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಭೈರೇಗೌಡ, ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಅವರು ಸೇರಿದಂತೆ ಇತರೆ ಪದಾಧಿಕಾರಿಗಳು ಪ್ರಶಸ್ತಿ ಫಲಕ, ಶಾಲು, ಹಾರ, ಫಲ, ತಾಂಬೂಲ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷರಾದ ಮನುಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಮಂಜುಳ ಆರ್., ರಾಜ್ಯ ಖಜಾಂಚಿ ನಂಜುಂಡ, ರಾಜ್ಯ ಕಾರ್ಯದರ್ಶಿ ಶಿವಕುಮಾರ್, ಮೈಸೂರು ಜಿಲ್ಲಾ ಅಧ್ಯಕ್ಷರಾದ ಸಂತೋಷ್, ಡಿಪಿಕೆ ಪರಮೇಶ್, ಜಿಲ್ಲಾ ಘಟಕದ ಸದಸ್ಯರಾದ ಕಿರಣ್, ಗೌರವ ಅಧ್ಯಕ್ಷರಾದ ನಾಗರಾಜು, ಆಪ್ತ ಕಾರ್ಯದರ್ಶಿ ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಲೋಕೇಶ್, ಲೋಕೇಶ್ ಚಿನ್ನಬುದ್ದಿ, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಸೌಭಾಗ್ಯ, ಬೊಮ್ಮನಹಳ್ಳಿ ಕುಮಾರ್, ಕೆ.ಎಸ್.ಪೂರ್ಣಿಮಾ ಇತರರು ಇದ್ದರು.
ಕೇವಲ ಪ್ರತಿಭೆ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆಯನ್ನು ಗುರುತಿಸಿ ಕನ್ನಡಾಂಬೆ ರಕ್ಷಣಾ ವೇದಿಕೆವತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಹಿಂದೆ ನಾವು ಗುರುತಿಸಿ ಸನ್ಮಾನಿಸಿದ ಶಿಕ್ಷಕರು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿರುವುದು ಸಂತಸದ ವಿಷಯವಾಗಿದೆ.
ಬಿ.ಬಿ.ರಾಜಶೇಖರ್, ಅಧ್ಯಕ್ಷರು, ಕನ್ನಡಾಂಬೆ ರಕ್ಷಣಾ ವೇದಿಕೆ.
0 ಕಾಮೆಂಟ್‌ಗಳು