ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕೇಂದ್ರ ಜವಳಿ ಸಚಿವಾಲಯದ ಕರಕುಶಲ ವಿಭಾಗದ ಸಹಕಾರದಲ್ಲಿ ಸೆ.೧೨ರಿಂದ ಸೆ.೨೧ರವರೆಗೆ ಗಾಂಧಿ ಶಿಲ್ಪ ಬಜಾರ್ ಮೇಳ ಆಯೋಜಿಸಲಾಗಿದೆ ಎಂದು ಸಂಯೋಜಕ ರಾಕೇಶ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.೧೨ರಂದು ಸಂಜೆ ೪ಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸುವರು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಎಂ.ರೂಪಕಲಾ ಶಶಿಧರ್ ಭಾಗವಹಿಸುವರು ಎಂದು ತಿಳಿಸಿದರು.
ದೇಶದ ೨೫ಕ್ಕೂ ಹೆಚ್ಚು ರಾಜ್ಯಗಳ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ಪುರಸ್ಕೃತ ೧೫೦ ಕರಕುಶಲಕರ್ಮಿಗಳು, ಕೈಮಗ್ಗ ನೇಕಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುವರು. ಮರದ ಶಿಲ್ಪಗಳು, ಕಂಚಿನ ವಿಗ್ರಹಗಳು, ಆಭರಣಗಳು, ಸೀರೆ ಮುಂತಾದ ಉಡುಪುಗಳು, ಚಪ್ಪಲಿಗಳು ದೊರೆಯಲಿವೆ. ಮೇಳವು ಬೆಳಿಗ್ಗೆ ೧೦.೩೦ರಿಂದ ರಾತ್ರಿ ೯ರವರೆಗೆ ತೆರೆದಿರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರಕುಶಲ ಸೇವಾಕೇಂದ್ರ ಸಹಾಯಕ ನಿರ್ದೇಶಕ ಎಸ್.ವಿನೋದ್ ಕುಮಾರ್, ಅರ್ಬನ್ ಹಾತ್ ಯೋಜನಾಧಿಕಾರಿ ಶಿವನಂಜಸ್ವಾಮಿ ಇದ್ದರು.