ಪಾಕಿಸ್ತಾನಕ್ಕೆ ಯುದ್ಧ ನೆರವು ನೀಡಿದ್ದ ಚೀನಾಕ್ಕೆ ಪ್ರಧಾನಿ ಭೇಟಿ ಸರಿಯೇ? : ರೇಹಾನ್ ಬೇಗ್ ಬೇಸರ


 ಮೈಸೂರು : ಪುಲ್ವಾಮ ಘಟನೆಯ ನಂತರ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಚೀನಾ ದೇಶ ಪಾಕಿಸ್ತಾನಕ್ಕೆ ಯುದ್ಧ ನೆರವು ನೀಡಿತ್ತು, ಇಂತಹ ಭಾರತದ ಬದ್ಧ ವೈರಿ ಚೀನಾ ದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರ ಜತೆ ಕೈ ಕುಲುಕುವಾಗ ಪುಲ್ವಾಮ ದಾಳಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಮೃತರಾದ ಭಾರತೀಯರ ರಕ್ತ ಪ್ರಧಾನಿಗೆ ನೆನಪಾಗಲಿಲ್ಲವೇ ಎಂದು ಕಾಂಗ್ರೆಸ್ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಡಿ.ರೇಹಾನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದ್ದು, ಮತಗಳ್ಳರು ಅಧಿಕಾರ ತೊರೆಯುವ ಕಾಲ ಸನ್ನಿಹಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬಿಹಾರ ಚುನಾವಣೆ ಸಂಬಂಧ ಬಿಜೆಪಿ ಮುಖಂಡರೊಬ್ಬರು ಮತಗಳವು ವಿಚಾರದ ಬಗ್ಗೆ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷ ನಿರಂತರವಾಗಿ ಹೋರಾಟವನ್ನೇ ಮಾಡುತ್ತಿರಲಿ, ನಾವು ಗೆಲ್ಲುತ್ತಲೇ ಇರುತ್ತೇವೆ ಎಂದು ಟೀಕಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಹತ್ತಾರು ವರ್ಷಗಳ ಕಾಲ ಹೋರಾಟ ಮಾಡಿ ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್ ಪಕ್ಷ, ಅಂತಹ ರಾಷ್ಟ್ರಪಿತನ ಎದೆಗೆ ಗುಂಡಿಕ್ಕಿ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ವಿರುದ್ಧವೂ ನಮ್ಮ ಹೋರಾಟ ಮುಂದುವರಿದಿತ್ತು. ಬ್ರಿಟೀಷರು ಭಾರತವನ್ನು ಬಿಟ್ಟುಹೋದಾಗ ಈ ದೇಶವನ್ನು ಸಶಕ್ತ ಭಾರತವನ್ನಾಗಿ ಕಟ್ಟಿದ್ದು ಕಾಂಗ್ರೆಸ್ ಪಕ್ಷದ ಪ್ರಧಾನಿ ಪಂಡಿತ್ ಜವಹಾರ್ ಲಾಲ್ ನೆಹರು ಅವರು, ಕಾಂಗ್ರೆಸ್ ಪಕ್ಷವು ಯಾವುದೇ ಸ್ವಂತ ಹಿತಾಸಕ್ತಿ ಹೊಂದಿಲ್ಲ, ಈ ದೇಶದ ಅಭಿವೃದ್ಧಿಯನ್ನು ಮಾಡುವುದೇ ಕಾಂಗ್ರೆಸ್ ಪಕ್ಷದ ಗುರಿ, ಇದಕ್ಕಾಗಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ಗಾಂಧಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದಾಗ್ಯೂ ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬ ಇಂದಿಗೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಮುಂದೆಯೂ ಈ ದೇಶದ ಸಂಪತ್ತಿನ ರಕ್ಷಣೆಗಾಗಿ, ಜನರ ಸುಭೀಕ್ಷೆಗಾಗಿ ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ. 

ಮತಗಳ್ಳರನ್ನು ಅಧಿಕಾರದಿಂದ ಕಿತ್ತೊಗೆದು ಅವರ ಮೂಲ ಸ್ಥಾನಕ್ಕೆ ಕಳಿಸುವ ತನಕವೂ ಕಾಂಗ್ರೆಸ್ ಪಕ್ಷದ ಹೋರಾಟ ಮುಂದುವರಿಸುತ್ತಲೇ ಇರುತ್ತದೆ ಎಂದು ರೇಹಾನ್ ಬೇಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಡೀ ಬಿಹಾರ ಕಾಂಗ್ರೆಸ್ ಪಕ್ಷದ ಜತೆಗಿದೆ

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿರುವ ಮತಗಳವು ಆರೋಪಕ್ಕೆ ಪ್ರಧಾನಿ ಉತ್ತರವನ್ನೇ ನೀಡಿಲ್ಲ, ಮತಗಳವು ಮಾಡಿ ಬಿಜೆಪಿ ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ ಎಂಬ ಸತ್ಯದ ಅರಿವು ಬಿಹಾರ ಜನತೆಗೆ ಮನವರಿಕೆಯಾಗಿ ಇಡೀ ಬಿಹಾರ ಇಂದು ಕಾಂಗ್ರೆಸ್ ಪಕ್ಷದ ಜತೆಗಿದೆ.

ಡಿ.ರೇಹಾನ್ ಬೇಗ್, ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ 

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು