ಬೀದಿ ಬದಿ ವ್ಯಾಪಾರಿಗಳ ಸಂಘಟನೆ ತೃಪ್ತಿ ತಂದಿದೆ: ಆರ್.ಮೂರ್ತಿ

ಎಂ.ರಸೂಲ್ ನೇತೃತ್ವದಲ್ಲಿ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗಕ್ಕೆ 100 ಪದಾಧಿಕಾರಿಗಳ ನೇಮಕ

ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ನಗರ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗುತ್ತಿದ್ದು, ಇದಕ್ಕೆ ಕಾರಣಕರ್ತರಾದ ಕ್ರಿಯಾಶೀಲ ಅಧ್ಯಕ್ಷ ಎಂ. ರಸೂಲ್ ಅವರ ಕಾರ್ಯವೈಖರಿ ತಮಗೆ ತೃಪ್ತಿ ತಂದಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಮೂರ್ತಿ ಹೇಳಿದರು.

ನಗರದ ಎನ್‍ಆರ್ ಮೊಹಲ್ಲದಲ್ಲಿರುವ ಮೈಸೂರು ನಗರ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಕಚೇರಿ ಆವರಣದಲ್ಲಿ ನಡೆದ ಪದಾಧಿಕಾರಿಗಳ ನೇಮಕಾತಿ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ವಿತರಿಸಿ ಅವರು ಮಾತನಾಡಿದರು. 

ಕಾಂಗ್ರೆಸ್ ಪಕ್ಷ ಬಡವರ ಪರವಾಗಿರುವ ಪಕ್ಷವಾಗಿದೆ, ಇತ್ತೀಚೆಗೆ ರಾಹುಲ್ ಗಾಂಧಿ ಅವರು ದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳನನ್ನು ಸಂಘಟಿಸುವ ದೃಷ್ಟಿಯಿಂದ ಈ ವಿಭಾಗವನ್ನು ಪ್ರಾರಂಭಿಸಲು ಪ್ರೋತ್ಸಾಹಿಸಿದ ಕಾರಣ ಇಂದು ದೇಶದಲ್ಲಿ ಕೊಟ್ಯಾಂತರ ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದಿದ್ದಾರೆ. ಇದಕ್ಕೆ ಪೂರಕವಾಗಿ ಈ ವಿಭಾಗದ ಪದಾಧಿಕಾರಿಗಳು ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಅಲ್ಲದೇ ಮೈಸೂರು ನಗರದಲ್ಲಿ ರಸೂಲ್ ನೇತೃತ್ವದಲ್ಲಿ ಹೆಚ್ಚು ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬುವುದರ ಜತೆಗೆ, ತಮಗೆ ಬೇಕಾದ ಅಗತ್ಯ ಅನುಕೂಲಗಳನ್ನು ಪಡೆದುಕೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು. 

ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ವಿಭಾಗದ ನಗರಾಧ್ಯಕ್ಷ ಎಂ.ರಸೂಲ್ ಮಾತನಾಡಿ, ಮೈಸೂರು ನಗರದಲ್ಲಿ ಸುಮಾರು 10,726 ಜನರು ಬಿದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇವರ ಪೈಕಿ ನಾವು ಈಗಾಗಲೇ 3,230 ಜನರನ್ನು ಸಂಪರ್ಕಿಸಿ ಅವರಿಗೆ ಮೈಸೂರು ಮಹಾನಗರಪಾಲಿಕೆಯಿಂದ ಲೈಸೆನ್ಸ್ ಕೊಡಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಬೀದಿ ಬದಿ ವ್ಯಾಪಾರಿಗಳಿಗೆ ಆಗಾಗ್ಗೆ ಕಾರ್ಯಾಗಾರಗಳನ್ನು ಏರ್ಪಡಿಸಿ ರಸ್ತೆ ಸಂಚಾರಕ್ಕೆ, ಪಾದಚಾರಿಗಳಿಗೆ, ಪಾದಚಾರಿ ಮಾರ್ಗಕ್ಕೆ ಯಾವುದೇ ರೀತಿಯಲ್ಲೂ ತೊಂದರೆ ಉಂಟಾಗದಂತೆ ನಿಮ್ಮ ವ್ಯಾಪಾರ ವ್ಯವಹಾರಗಳನ್ನು ನಿರ್ವಹಿಸಿ ಎಂದು ಜಾಗೃತಿ, ಅರಿವು ಮೂಡಿಸುತ್ತಿದ್ದೇವೆ. ಇದರಿಂದ ನಮ್ಮಲ್ಲಿ ನೊಂದಾಯಿತರಾದ ವ್ಯಾಪಾರಿಗಳಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೈಸೂರು ನಗರದ ವಿವಿಧ ಬಡಾವಣೆ, ವಾರ್ಡುಗಳಲ್ಲಿ ವ್ಯಾಪಾರ ಮಾಡುವ 100ಕ್ಕೂ ವ್ಯಾಪಾರಿಗಳನ್ನು ಪದಾಧಿಕಾರಿಗಳಾಗಿ ನೇಮಿಸಿ ಅವರಿಗೆ ನೇಮಕಾತಿ ಪತ್ರವನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಮೂರ್ತಿ  ಮುಖಂಡರಾದ ಗಿರೀಶ್, ಎಸ್.ರಾಜೇಶ್ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಬೀದಿ ಬದಿ ವ್ಯಾಪಾರಿಗಳು ಸಹ ತಮ್ಮ ನೆಚ್ಚಿನ ನಾಯಕ ಎಂ.ರಸೂಲ್ ಅವರಿಗೆ ಬೃಹತ್ ಗಾತ್ರದ ಬಾದಾಮಿ ಹಾರವನ್ನು ಹಾಕಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಅಜ್ಮಲ್ ಪಾಷ, ಶೌಕತ್, ರಹಮತುಲ್ಲಾ, ಜುನೇದ್, ಏಜಾಸ್, ಅಲೀಂ, ಫಯಾಸ್, ಸಾದೀಖ್, ಮಾಹಿದ್, ಸಾಧಿಖ್  ಮೊಹಮ್ಮದ್ ಸಿದ್ದೀಖ್ ಮುಂತಾದವರು ಇದ್ದರು.

ಮಾಹಿದ್, ಸಾಧಿಖ್ ಅವರಿಂದ ರಸೂಲ್‍ಗೆ ಬೃಹತ್ ಬಾದಾಮಿ ಹಾರ

ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಕಚೇರಿ ಮುಂಭಾಗದ ನಡೆದ ಪಕ್ಷ ಸೇರ್ಪಡೆ, ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮದಲ್ಲಿ ಮೈಸೂರು ನಗರದ ನೂರಾರು ಬೀದಿ ಬದಿ ವ್ಯಾಪಾರಿಗಳು ತಮ್ಮ ನೆಚ್ಚಿನ ನಾಯಕ ಎಂ.ರಸೂಲ್ ಅವರಿಗೆ ಬೃಹತ್ ಬಾದಾಮಿ ಹಾರವನ್ನು ಹಾಕಿ ಗೌರವಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು