ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: 105 ವರ್ಷಗಳು ಪೂರೈಸಿರುವ ನಗರದ ‘ದಿ ರೈಲ್ವೆ ಕೋ ಆಪರೇಟೀವ್ ಬ್ಯಾಂಕ್’ ತನ್ನ ಶತಮಾನೋತ್ಸವ ಹಾಗೂ 105ನೇ ವರ್ಷದ ಸಂಭ್ರಮವನ್ನು `ಶತ ಪಯಣ' ಎಂಬ ಹೆಸರಿನಲ್ಲಿ ಸೆಪ್ಟೆಂಬರ್ 6ರಂದು ಬೆಳಿಗ್ಗೆ 10.30ಕ್ಕೆ ಜೆ.ಕೆ. ಮೈದಾನದಲ್ಲಿರುವ ಎಂಎಂಸಿ
ಮತ್ತು ಆರ್‍ಐ ಪ್ಲಾಟಿನಮ್ ಜುಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ `ಸಹಕಾರ ರತ್ನ' ಪುರಸ್ಕೃತ ಎಂ.ಬಿ. ಮಂಜೇಗೌಡ ಹೇಳಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 1920 ರಲ್ಲಿ ಒಂದು ಚಿಕ್ಕ ಸಹಕಾರ ಸಂಘವಾಗಿ ಪ್ರಾರಂಭವಾದ ಈ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ನಮ್ಮಲ್ಲಿ 10 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. 1200 ಕೋಟಿ ಆಸ್ತಿ ಇದೆ. ಕೇವಲ ಅರ್ಧ ಗಂಟೆಯಲ್ಲಿ ನಾವು ನಮ್ಮ ಸದಸ್ಯರಿಗೆ 25 ಲಕ್ಷ ಸಾಲ ನೀಡುತ್ತೇವೆ. ನಮ್ಮಲ್ಲಿ ಶೂನ್ಯ ಎನ್‍ಪಿಎ ಇದ್ದು, ಎಲ್ಲ ಆಧುನಿಕ ತಂತ್ರಜ್ಞಾನ ನಮ್ಮ ಬ್ಯಾಂಕಿಂಗ್ ಲಭ್ಯವಿದೆ. ಪ್ರಸಕ್ತ ಸಾಲಿನಲ್ಲಿ ನಾವು 12 ಕೋಟಿ ಲಾಭ ಗಳಿಸಿದ್ದು, ಶೇ.8.25 ಡಿವೆಡೆಂಟ್ ನೀಡಿದ್ದೇವೆ. ನಮ್ಮಲ್ಲಿ 650 ಕೋಟಿ ರೂ.ಗಳಿಗೂ ಮೀರಿದ ಠೇವಣಿಗಳಿವೆ ಎಂದು ಹೇಳಿದರು.
ಈ ವಿಶೇಷ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಗಣ್ಯರು ಮತ್ತು ರೈಲ್ವೆ ಅಧಿಕಾರಿಗಳು ಭಾಗವಹಿಸುವರು ಎಂದು ಕಾರ್ಯಕ್ರಮದ ಪಟ್ಟಿಯನ್ನು ಹೇಳಿದರು.
2007ರಲ್ಲಿ ಮೈಸೂರು ಜಿಲ್ಲೆಯ ಅತ್ಯುತ್ತಮ ಸಹಕಾರ ಬ್ಯಾಂಕ್ ಎಂಬ ಗೌರವವನ್ನು ಈ ಸಂಸ್ಥೆ ಪಡೆದಿದೆ.
ಬ್ಯಾಂಕ್ ಸಂಪೂರ್ಣ ಕಂಪ್ಯೂಟರೀಕರಣಗೊಂಡಿದೆ. ಎ-ಗ್ರೇಡ್ ಸ್ಥಾನಮಾನ ಗಳಿಸಿ, 2009ರಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಅನ್ನು ಬಹುರಾಜ್ಯ ಸಹಕಾರ ಬ್ಯಾಂಕ್ ಆಗಿ ಪರಿವರ್ತಿಸಲು ಹಾಗೂ ಹುಬ್ಬಳ್ಳಿ, ಮಂಗಳೂರು, ಮಂಡ್ಯ ಮತ್ತು ದಾವಣಗೆರೆಯಲ್ಲಿ ಹೊಸ ಶಾಖೆಗಳನ್ನು ತೆರೆಯುವ ಉದ್ದೇಶವಿದೆ ಎಂದು ಮಂಜೇಗೌಡ ಅವರು ತಿಳಿಸಿದರು. ಶತಮಾನೋತ್ಸವ ಸಮಾರಂಭದಲ್ಲಿ ಬ್ಯಾಂಕ್ ಸ್ಥಾಪನೆಗೆ ಕೊಡುಗೆ ನೀಡಿದ ಹಿರಿಯ ಸದಸ್ಯರು ಹಾಗೂ ಪ್ರಮುಖ ವ್ಯಕ್ತಿಗಳನ್ನು ಸನ್ಮಾನಿಸಲಾಗುವುದು. ಜೊತೆಗೆ, ಬ್ಯಾಂಕ್ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಲೋಗೋ ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಸ್. ಆನಂದ್, ಸಿಇಒ ನಾರಾಯಣ್, ನಿರ್ದೇಶಕರಾದ ಶಿವಶಂಕರ ಸಿ., ಶ್ವೇತಾ, ಉತ್ತೇಜ್, ಚಂದ್ರು, ನಿರ್ಮಲಾ, ಪ್ರಧಾನ ವ್ಯವಸ್ಥಾಪಕರಾದ ಸತ್ಯನಾರಾಯಣ ಮತ್ತು ಲಕ್ಷ್ಮೀಪ್ರಸಾದ್ ಹಾಜರಿದ್ದರು.
0 ಕಾಮೆಂಟ್‌ಗಳು