ಕನ್ನಡ ನೆಲ, ಜಲ, ಬಾಷೆಯ ರಕ್ಷಣೆಗೆ ಕರ್ನಾಟಕ ವಿಜಯ ಪಡೆ ಬದ್ಧ : ಸಿ.ಕೆ.ಗೋವಿಂದೇಗೌಡ


ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಭಾಷಿಕರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಕನ್ನಡ ನಾಡು, ನುಡಿ, ಭಾಷೆಯ ರಕ್ಷಣೆಗೆ ನಮ್ಮ ಸಂಘಟನೆ ಬದ್ಧವಾಗಿದೆ ಎಂದು ಕರ್ನಾಟಕ ವಿಜಯ ಪಡೆ ಅಧ್ಯಕ್ಷರಾದ ಸಿ.ಕೆ.ಗೋವಿಂದೇಗೌಡ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಕರ್ನಾಟಕ ವಿಜಯ ಪಡೆ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಕನ್ನಡ ಭಾಷೆಯ ರಕ್ಷಣೆ ನಮ್ಮ ಮನೆ ಮನಗಳಿಂದಲೇ ಮೊದಲು ಪ್ರಾರಂಭವಾಗಬೇಕು ಎಂದರು.

ನಮ್ಮ ಮಕ್ಕಳಿಗೆ ಮೊದಲು ಕನ್ನಡ ಭಾಷೆ, ನಮ್ಮ ನೆಲ, ಜಲ ಮತ್ತು ಸಂಸ್ಕೃತಿಯ ಅರಿವನ್ನು ಮೂಡಿಸಬೇಕಿದೆ. ರಾಜ್ಯದಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿದೆ, ನಾವು ಯಾವುದೇ ಭಾಷೆಯ ದ್ವೇಷಿಗಳಲ್ಲ, ಆದರೇ, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎನ್ನುವುದನ್ನು ನಾವು ತೋರಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಹಣ ನೀಡದೆ ಜನ ಸಾಮಾನ್ಯರ ಯಾವುದೇ ಕೆಲಸಗಳು ಕಚೇರಿಗಳಲ್ಲಿ ಆಗುತ್ತಿಲ್ಲ, ನಾವು ಸಾರ್ವಜನಿಕ ಜೀವನದಲ್ಲಿ ಇರುವ ಕಾರಣ ನಮ್ಮ ಸಂಘಟನೆಯ ಕಾರ್ಯಕರ್ತರು ತಮ್ಮ ನಡವಳಿಕೆಗಳನ್ನು ಬದಲಾಯಿಸಿಕೊಳ್ಳಬೇಕು. ಬಡ ಜನರ ನೆರವಿಗೆ ಧಾವಿಸಬೇಕು. ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಜನ ಸಾಮಾನ್ಯರು ಮತ್ತು ರೈತಾಪಿ ಜನರ ಕೆಲಸಗಳನ್ನು ಮಾಡಿಸಿಕೊಡಬೇಕು. ಮಾಹಿತಿ ಹಕ್ಕು ಕಾಯ್ದೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಜಾತಿ, ವರ್ಗ, ಮೇಲು, ಕೀಳು ಮುಂತಾದ ತಾರತಮ್ಯಗಳನ್ನು ನಮ್ಮ ಕಾರ್ಯಕರ್ತರು ಮಾಡಬಾರದು. ಸಮಾಜದಲ್ಲಿ ಸರ್ವ ಜನರೂ ಶಾಂತಿಯುತವಾಗಿ ಬದುಕುವಂತೆ ನಮ್ಮ ಕೆಲಸ ಕಾರ್ಯಗಳು ಇರಬೇಕು. ನಮಗೆ ಯಾವುದೇ ವ್ಯಕ್ತಿಯಾಗಲೀ, ಅಧಿಕಾರಿಗಳಾಗಲೀ ಅಥವಾ ರಾಜಕಾರಣಿಗಳಾಗಲೀ ಒಂದೇ ಆಗಿದ್ದು, ವೈಯುಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಲಾಗುವುದು, ನಮ್ಮ ಸಂಘಟನೆಯ ಕಾರ್ಯಕರ್ತರು ಯಾವುದೇ ಒಂದು ವಿಚಾರದ ಬಗ್ಗೆ ಕಾರ್ಯಾಚರಣೆ ನಡೆಸುವ ಮುನ್ನ ಆ ವಿಚಾರದ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಳ್ಳಬೇಕು. ಸಂಬಂಧ ಪಟ್ಟ ಅಧಿಕಾರಿಗಳು ಅಥವಾ ಜನ ಪ್ರತಿನಿಧಿಗಳ ಗಮನ ಸೆಳೆದು ಅದಕ್ಕೆ ಸೂಕ್ತ ಸೌಹಾರ್ದತೆಯಿಂದ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಹೇಳಿದರು.

ನಮ್ಮ ಸಂಘಟನೆಗೆ ಸಾಹಿತಿಗಳು, ಸಾಧಕರು, ವಿಚಾರವಂತರು, ಕಾನೂನು ಪಂಡಿತರು, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದ ಪರಿಣಿತರನ್ನು ಸೇರ್ಪಡೆ ಮಾಡಿಕೊಂಡು ಕನಿಷ್ಠ ತಿಂಗಳಿಗೊಂದು ಕಾರ್ಯಕ್ರಮ ನಡೆಸುವ ಮೂಲಕ ರಾಜ್ಯದಲ್ಲಿ ಕರ್ನಾಟಕ ವಿಜಯ ಪಡೆ ಸಂಘಟನೆಯನ್ನು ಬಲವಾಗಿ ಕಟ್ಟೋಣ ಎಂದು ಹೇಳಿದರು.

ನಮಗೆ ಅಥವಾ ನಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗಗಳು ಸಿಗುವುದು ಕಷ್ಟ, ಆದರೇ, ಇಂದಿನ ದಿನಗಳಲ್ಲಿ ಬದುಕಲು ಸಾಕಷ್ಟು ಅವಕಾಶಗಳಿಗೆ ಮಕ್ಕಳಿಗೆ ವಿವಿಧ ಕೌಶಲ್ಯಗಳನ್ನು ಕಲಿಸುವ ಮೂಲಕ ನಾವೇ ಉದ್ಯೋಗದಾತರಾಗೋಣ ಎಂದು ಸಲಹೆ ನೀಡಿದರು.  

ತರಬೇತಿ ಶಿಬಿರದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಹೇಂದ್ರ ಕುಮಾರ್, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಗುರುಶ್ರೀ, ರಾಜ್ಯ ಕಾರ್ಯದರ್ಶಿ ಮಂಜುಳ ರುದ್ರೇಗೌಡ, ಕುಶಾಲನಗರದ ಎಂ.ನಾಗರಾಜು, ಸಹ ಕಾರ್ಯದರ್ಶಿ ನಟರಾಜ್ ಮಂಡ್ಯ, ರಾಜ್ಯ ಸಮಿತಿ ಸದಸ್ಯರಾದ ರವಿಗೌಡ ಪಾಂಡವಪುರ, ಮಹಿಳಾ ಸದಸ್ಯರಾದ ದೀಪ, ನೇಹ, ಲಕ್ಷ್ಮಿ, ಪುಟ್ಟಸ್ವಾಮಿ, ಕುಣಿಗಲ್ ಪರಮೇಶ್‌ಗೌಡ,  ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಭಿನ್ನ ಸೇವೆಗಳನ್ನು ಮಾಡೋಣ

ರಾಜ್ಯದಲ್ಲಿ ಸಾಕಷ್ಟು ಕನ್ನಡ ಪರ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ನಾವು ಯಾವುದೇ ಸಂಘಟನೆಗೆ ಪೈಪೋಟಿ ನೀಡುತ್ತಿಲ್ಲ, ವಿಶೇಷ ಸೇವೆಯ ಮೂಲಕ ನಮ್ಮ ಸಂಘಟನೆಯನ್ನು ವಿಭಿನ್ನವಾಗಿ ಕಟ್ಟಬೇಕು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಮತ್ತು ಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಳ್ಳೋಣ ಎಂದು ಹೇಳಿದರು.

ಮಧುಕರ್, ಸಂಸ್ಥಾಪಕ ಅಧ್ಯಕ್ಷರು

ನಮಗೆ ಜಾತಿ ವಿವಾದ ಬೇಕಿಲ್ಲ

ನಾವು ಸಮಾಜವನ್ನು ಒಗ್ಗೂಡಿಸಬೇಕಿದೆ. ನಮಗೆ ಜಾತಿ ವಿವಾದಗಳು ಬೇಕಿಲ್ಲ, ಕನ್ನಡ ನೆಲ, ಜಲ, ಭಾಷೆಯ ರಕ್ಷಣೆ, ಬಡಜನರು, ರೈತಾಪಿಗಳ ರಕ್ಷಣೆಯೂ ನಮಗೆ ಮುಖ್ಯವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಮೊದಲು ಲಂಚ ಕೊಡುವುದನ್ನು ತಪ್ಪಿಸಬೇಕಿದೆ.

ಸಿ.ಕೆ.ಗೋವಿಂದೇಗೌಡ, ಅಧ್ಯಕ್ಷರು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು