ಮೈಸೂರು : ಪೆಹಲ್ಗಾಮ್ ಘಟನೆಯ ಬಳಿಕ ಭಾರತೀಯ ಸೈನಿಕರು ಪಾಕಿಸ್ತಾನ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದು ಅತ್ಯಂತ ಹೆಮ್ಮೆಯ ವಿಷಯವಾಗಿದ್ದು, ಸರ್ಕಾರ ತಮಗೆ ಮತ್ತೊಂದು ಅವಕಾಶ ಕೊಟ್ಟರೆ ಮತ್ತೆ ಸೈನ್ಯಕ್ಕೆ ಸೇರಿ ಪ್ರಾಣವನ್ನು ಪಣವಿಟ್ಟು ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿ ಗಜಾನನ ಟಿ.ಭಟ್ ಹೇಳಿದರು.
ಆಪರೇಷನ್ ಸಿಂಧೂರ್ ಯಶಸ್ಸಿನ ಹಿನ್ನಲೆ ಕುವೆಂಪು ನಗರದ ರಾಷ್ಟ್ರಕವಿ ಕುವೆಂಪು ಪುತ್ಥಳಿ ಎದುರು ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿಗಳ ಸಂಘದ ಸದಸ್ಯರೊಂದಿಗೆ ತಿರಂಗ ಪ್ರದರ್ಶನ ನಡೆಸಿ ಭಾರತದ ಪರ ಘೋಷಣೆ ಕೂಗಿ ಅವರು ಮಾತನಾಡಿದರು.
ಪೆಹಲ್ಗಾಮ್‍ನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರನ್ನು ನಿಷ್ಕಾರುಣ್ಯವಾಗಿ ಹತ್ಯೆ ಮಾಡಿ ಮಹಿಳೆಯರ ಸಿಂಧೂರವನ್ನು ಅಳಿಸಿ ಹಾಕಿದ್ದರ ಪರಿಣಾಮ ನಮ್ಮ ಸೈನಿಕರು ಆಪರೇಷನ್ ಸಿಂಧೂರ್ ಹೆಸರಿನಲ್ಲಿಯೇ ಉಗ್ರರ ನೆಲೆಗಳನ್ನು ಧ್ವಂಸ ಮಾಡುವ ಮೂಲಕ ತಮ್ಮ ಶೌರ್ಯವನ್ನು ತೋರಿಸಿ ಸ್ಪಷ್ಟ ಉತ್ತರ ನೀಡಿದ್ದಾರೆ. ಇವರ ಸಾಹಸವನ್ನು ಮೆಚ್ಚಿ, ನಮ್ಮ ಸೈನಿಕರಿಗೆ ನೈತಿಕವಾಗಿ ಬೆಂಬಲ ಸೂಚಿಸಲು ಈ ತಿರಂಗ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.
ಕೊಡಗಿನ ವೀರಯೋಧ ನಿವೃತ್ತ ನೌಕಾಪಡೆ ಅಧಿಕಾರಿ ಕುಟ್ಟು ಕತ್ತೀರ ಸೋಮಣ್ಣ ಮಾತನಾಡಿ, ಭಾರತೀಯ ಸೈನಿಕರು ಕೇವಲ 22 ನಿಮಿಷದಲ್ಲಿ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಈ ಕಾರ್ಯಾಚರಣೆ ಕೇವಲ ಉಗ್ರರ ವಿರುದ್ಧವಾಗಿತ್ತು, ಯಾವುದೇ ಸಾರ್ವಜನಿಕರಿಗೆ ಹಾನಿ ಮಾಡಿಲ್ಲ, ಆಪರೇಷನ್ ಸಿಂಧೂರಕ್ಕೆ ನಮ್ಮ ಸೇನಾಧಿಕಾರಿಗಳು ಪೂರ್ಣ ವಿರಾಮವನ್ನೂ ಸಹ ಘೋಷಿಸಿಲ್ಲ, ಉಗ್ರರು ಬಾಲ ಬಿಚ್ಚಿದರೆ ಸಂಪೂರ್ಣವಾಗಿ ನಿರ್ನಾಮ ಮಾಡಲಾಗುವುದು ಎಂದು ಹೇಳಿದರು.
ನಿವೃತ್ತ ರೇರ್ ಅಡ್ಮಿರಲ್ ರವಿ ಗಾಯಕ್‍ವಾಡ್ ಮಾತನಾಡಿ,
ಭಾರತೀಯ ಸೈನಿಕರು ಅಂತ್ಯಂತ ಸುಧಾರಿತ ತಂತ್ರಜ್ಞಾನವನ್ನು ಬಳಸಿ 6 ರಿಂದ 10 ಉಗ್ರರ ನೆಲೆಗಳನ್ನು ಕ್ಷಣ ಮಾತ್ರದಲ್ಲಿ ಧ್ವಂಸ ಮಾಡುವ ಮೂಲಕ ಉಗ್ರವಾದವನ್ನು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ, ಬೆಂಬಲಿಸುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಸೈನಿಕರಾದ ಸೈಯದ್ ತಾಜುದ್ದೀನ್ ಹೈದರಿ(ಸಬ್‍ಮೆರಿನ್), ವಿ.ಜಯಪ್ರಕಾಶ್, ಎನ್.ಎ.ಸ್ವಾಮಿ, ಚಿಂಗಪ್ಪ, ವೀರನಾರಿ ಉಷಾ ಅಯ್ಯರ್, ಪೂವಯ್ಯ, ಚಂದ್ರಪ್ಪ, ಡಿ.ಯು.ಪ್ರಕಾಶ್, ಎ.ಪಿ.ಗಣಪತಿ, ಯು.ಜೆ.ಪ್ರಭಾಕರ್, ಉತ್ತಪ್ಪ, ಸಿ.ಆರ್.ಸುರೇಶ್, ಚಂದ್ರಕುಮಾರ್ ಮತ್ತಿತರ ನಿವೃತ್ತ ಯೋಧರು ಹಾಜರಿದ್ದರು.
0 ಕಾಮೆಂಟ್‌ಗಳು