ಪಾಂಡವಪುರ : 2 ವರ್ಷದ ವೇತನವನ್ನು ಬಾಕಿ ಉಳಿಸಿಕೊಂಡಿದ್ದ ಪಿಎಸ್‍ಎಸ್‍ಕೆ ಸಹಕಾರ ಸಕ್ಕರೆ ಕಾರ್ಖಾನೆ, ನಾಲ್ಕು ವರ್ಷದ ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕಾಳಜಿಯಿಂದ 36 ತಿಂಗಳ ವೇತನ ಪಾವತಿ ಮಾಡಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಪಿ ಎಸ್ ಎಸ್ ನೌಕರರು ಕೃತಜ್ಞತೆ ಸಲ್ಲಿಸಿದ್ದಾರೆ.
ಪಿಎಸ್‍ಎಸ್‍ಕೆ ಆಡಳಿತ ಮಂಡಳಿ ಜೂನ್-2017 ರಿಂದ ಜುಲೈ-2020ರ ತನಕ ಸುಮಾರು 40 ಕಾರ್ಮಿಕರ ವೇತನವನ್ನು ಕಾರಣಾಂತರದಿಂದ ತಡೆಹಿಡಿದಿತ್ತು. ಈ ಬಗ್ಗೆ ಕಾರ್ಮಿಕರು ಹಲವುಬಾರಿ ಪ್ರತಿಭಟನೆಯನ್ನೂ ಸಹ ನಡೆಸಿದ್ದರು.
ಕನಿಷ್ಠ ವೇತನದಲ್ಲಿ ಕೆಲಸ ಮಾಡುತ್ತಿರುವ ಪಿಎಸ್‍ಎಸ್‍ಕೆ ಕಾರ್ಖಾನೆ ಕಾರ್ಮಿಕರ 36 ತಿಂಗಳ ವೇತನ ತಡೆ ಹಿಡಿದಿದ್ದ ಕಾರಣ ನೌಕರರು ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿ ಸಾಲಸೋಲವನ್ನೂ ಮಾಡಿಕೊಂಡು ಸಂಕಷ್ಟಕ್ಕೆ ಈಡಾಗಿದ್ದರು. ಈ ವಿಷಯವನ್ನು ಪಿಎಸ್‍ಎಸ್‍ಕೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಗಮನಕ್ಕೆ ತಂದಾಗ ಶಾಸಕರು ಈ ವಿಚಾರವಾಗಿ ತುರ್ತು ಪತ್ರ ವ್ಯವಹಾರ ನಡೆಸಿ ಕೇನ್ ಕಮೀಷನರ್ ಅವರನ್ನು ಹಲವು ಬಾರಿ ಭೇಟಿ ಮಾಡಿಕೊನೆಗೂ 40 ಕಾರ್ಮಿಕರ 36 ತಿಂಗಳ ವೇತನವನ್ನು ಕೊಡಿಸುವಲ್ಲಿ ಸಫಲರಾದರು.
ಈ ಸಂಬಂಧ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಕಾರ್ಮಿಕ ಸಂಘದ ಕಚೇರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ 40 ಜನ ಕಾರ್ಮಿಕರಿಗೆ 36 ತಿಂಗಳ ಬಾಕಿ ವೇತನದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರು ಮಾತನಾಡಿ, ಯಾವುದೋ ಸಣ್ಣ ಪುಟ್ಟ ವ್ಯತ್ಯಾಸದಿಂದ 40 ಕಾರ್ಮಿಕರ 2 ವರ್ಷದ ವೇತನವನ್ನು ತಡೆಹಿಡಿಯಲಾಗಿತ್ತು. ಇದರಿಂದ ನಾವು ತುಂಬಾ ಕಷ್ಟ ಅನುಭವಿಸಿದೆವು. ನಮ್ಮ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು, ಕಾರ್ಮಿಕರ ಸಂಕಷ್ಟದ ವಿಷಯ ತಿಳಿದು ಕೇನ್ ಕಮೀಷನರ್ ಎಂ.ಆರ್, ರವಿಕುಮಾರ್ ಅವರೊಂದಿಗೆ ಮಾತನಾಡಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಬಾಕಿ ವೇತನ ಕೊಡಿಸಿ ನಮ್ಮ ಕಷ್ಟಪರಿಹರಿಸಿದ್ದಾರೆ ಎಂದು ಶ್ಲಾಘಿಸಿದರಲ್ಲದೇ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
40 ಕಾರ್ಮಿಕರ 36 ತಿಂಗಳ ಬಾಕಿ ವೇತನವನ್ನು 4 ವರ್ಷದ ಬಳಿಕ ಕೊಡಿಸುವಲ್ಲಿ ಕಬ್ಬು ಅಭಿವೃದ್ಧಿ ಆಯುಕ್ತರು, ಮಂಡ್ಯ ಜಿಲ್ಲಾಧಿಕಾರಿಗಳು, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ನಾಗಭೂಷಣ್, ಮಂಡ್ಯ ಜಿಲ್ಲಾ ರೈತಸಂಘದ ಅಧ್ಯಕ್ಷರಾದ
ಎ.ಎಲ್. ಕೆಂಪೂಗೌಡ, ಪಿಎಸ್‍ಎಸ್‍ಕೆ ಮಾಜಿ ಉಪಾಧ್ಯಕ್ಷರಾದ ಕೆನ್ನಾಳು ನಾಗರಾಜು, ರೈತ ಮುಖಂಡರಾದ ಬಾಲಕೃಷ್ಣ, ಪಿಎಸ್‍ಎಸ್‍ಕೆ ಕಾರ್ಖಾನೆ ಕಾರ್ಮಿಕ ಮುಖಂಡರಾದ ಆರ್.ರಮೇಶ್ ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕರಾದ ಕೆ.ಜಿ.ಮಧು, ಕೆ.ಎಂ.ಅಶ್ವಥ್, ಕೆ.ಜಿ.ಯೋಗೇಶ್, ಪ್ರಮೀಳ, ನಂದೀಶ್, ಭಾನುಪ್ರಿಯ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು